Advertisement

Lalita Srinivasan: ನೃತ್ಯ ಕೇವಲ ಕಲೆಯಲ್ಲ, ಅದು ಆಧ್ಯಾತ್ಮಿಕ ಅನುಭೂತಿ

03:50 PM Oct 02, 2023 | Team Udayavani |

ಈ ಸಲದ “ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ ಪಡೆದವರು ನೃತ್ಯಪಟು ಲಲಿತಾ ಶ್ರೀನಿವಾಸನ್‌. ನೃತ್ಯವನ್ನು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂಬ ಉದ್ದೇಶದಿಂದ “ನೂಪುರ’ ಎಂಬ ಶಾಲೆಯನ್ನು ಆರಂಭಿಸಿದ್ದು ಅವರ ಹೆಗ್ಗಳಿಕೆ. “ನೃತ್ಯವೇ ನನ್ನ ಉಸಿರು, ವಿದ್ಯಾರ್ಥಿಗಳೇ ನನ್ನ ಶಕ್ತಿ’ ಎನ್ನುವ ಅವರು, ನಡೆದು ಬಂದ ದಾರಿಯತ್ತ ತಿರುಗಿ ನೋಡಿದ್ದಾರೆ. ನೃತ್ಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Advertisement

ಹತ್ತನೇ ವಯಸ್ಸಿಗೇ ನೃತ್ಯ ಕಲಿಯಲು ಆರಂಭಿಸಿದ ನೀವು ಈ ಹೊತ್ತಿಗೂ ನೃತ್ಯದ ಬೇರೆ ಬೇರೆ ಪ್ರಕಾರಗಳನ್ನು ಕಲಿಯುತ್ತಾ, ಕಲಿಸುತ್ತಾ ಬಂದವರು. ಇದರ ಹಿಂದಿರುವ ಶಕ್ತಿ ಯಾವುದು?

ಚಿಕ್ಕವಯಸ್ಸಿನಲ್ಲಿಯೇ ನನಗೆ ನೃತ್ಯದ ಕಡೆಗೆ ಸೆಳೆತವಿತ್ತು. ಮಾಸ್ಟರ್‌ ಹಿರಣ್ಣಯ್ಯನವರ ತಂದೆ ನನ್ನ ನೃತ್ಯ ನೋಡಿ- “ಇವಳಿಗೆ ನೃತ್ಯ ಒಲಿಯುತ್ತದೆ, ಚೆನ್ನಾಗಿ ಕಲಿಸಿ’ ಎಂದು ನನ್ನ ತಂದೆಗೆ ಹೇಳಿದ್ದರಂತೆ. ನನ್ನ ಗುರು ಕೇಶವ ಮೂರ್ತಿಗಳು, ನೃತ್ಯವನ್ನು ವೈಜ್ಞಾನಿಕವಾಗಿ, ಶಾಸ್ತ್ರೀಯವಾಗಿ ಕಲಿಸಿದರು. ಶಿಸ್ತು, ಶ್ರದ್ಧೆ, ದೇಹವನ್ನು ಬಳಕಿಸುವಲ್ಲಿ ತೋರುವ ಬಹು ಸೂಕ್ಷ್ಮನಯ, ಇವೆಲ್ಲವೂ ಅವರದ್ದೇ ಕಾಣಿಕೆ. 33ನೇ ವಯಸ್ಸಿನಿಂದ ವೆಂಕಟಲಕ್ಷ್ಮಮ್ಮ ನನ್ನ ಗುರುವಾದರು. ಅವರ ಭಾಷಾಜ್ಞಾನ, ಆಂಗಿಕ ಅಭಿನಯ, ಸಂಗೀತದ ತಾಳ-ಲಯಗಳ ತಿಳುವಳಿಕೆ, ನೃತ್ಯದ ಕಾಕು, ಬಳುಕು, ಮಣಿತಗಳೆಲ್ಲವೂ ನನ್ನನ್ನು ಅಪಾರವಾಗಿ ಸೆಳೆದವು. ಇವತ್ತಿಗೂ ನನ್ನ ಹಿಂದಿರುವ ಶ್ರದ್ಧೆ, ಶಕ್ತಿ ಈ ಗುರುಪರಂಪರೆಯೇ.

ನೃತ್ಯ ಒಂದು ಬಹುಮುಖೀ ಕಲೆ. ಆದರೂ ಇತ್ತೀಚಿನ ದಿನಗಳಲ್ಲಿ ಕಲೆ ಏಕಾಕೃತಿಯನ್ನು ಪಡೆದುಕೊಳ್ಳುತ್ತಿದೆ ಅನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನೋಡಿ, “ಭಾರತೀಯತೆ’ ಎಂದರೆ ಕೇವಲ “ಫಿಸಿಕಲ್’ ಅಲ್ಲ. “ಇನ್ನರ್‌ ಕನೆಕ್ಟಿವಿಟಿ’ ಅಂದರೆ “ಒಳನೋಟ’ ತುಂಬಾ ಮುಖ್ಯ. ಈಗ ನಾವು ನಮ್ಮ ನೆಲದ ಭಾಷೆಯನ್ನು ಬಿಟ್ಟಿದ್ದೇವೆ. ಭಾಷೆ ಗೊತ್ತಿಲ್ಲ ಎಂದರೆ ಸಂಸ್ಕೃತಿ ಕೂಡಾ ಗೊತ್ತಾಗಲಾರದು. ನಮ್ಮ ನೆಲದ ಬಹುತ್ವಕ್ಕೆ ಸಂಬಂಧಿಸಿದ ಯಾವೊಂದು ವಿಷಯಗಳನ್ನೂ ನಾವು ಗ್ರಹಿಸುತ್ತಿಲ್ಲ. ನಮಗೆ ಮೊದಲೆಲ್ಲ ಮಹಾಭಾರತ, ರಾಮಾಯಣದ ಕಥೆಗಳು ಅತಿ ಚಿಕ್ಕ ವಯಸ್ಸಿನಲ್ಲಿ, ಓದಲು ಬರೆಯಲು ಬರುವ ಮೊದಲೇ ಗೊತ್ತಾಗುತ್ತಿತ್ತು. ತಿಳಿಸುವವರಿದ್ದರು. ಈ ನೆಲದ ಬಹುಮುಖಿ ಸಂಸ್ಕೃತಿಯನ್ನು ನಮ್ಮ ವ್ಯಕ್ತಿತ್ವಗಳಲ್ಲೇ ಇಂತಹ ವಿಷಯಗಳು ರೂಪಿಸುತ್ತಿದ್ದವು. ಕಲೆಗಳಲ್ಲಿ ಅವು ಅಭಿವ್ಯಕ್ತಿ ಪಡೆಯುತ್ತಿದ್ದವು. ಇವತ್ತಿಗೂ ಅಧ್ಯಯನನಿರತ ಶ್ರದ್ಧಾವಂತ ನೃತ್ಯ ಕಲಾವಿದರಲ್ಲಿ ಬಹುಮುಖತೆಯ ಮಣ್ಣಿನ ಸಶಕ್ತ ಅಭಿವ್ಯಕ್ತಿಯನ್ನು ಕಾಣಬಹುದು.

Advertisement

ಅಂತರಂಗದ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಲು “ನೃತ್ಯ’ ಸೂಕ್ತವಾಗಿಲ್ಲವೆಂದು ಯಾವಾಗಲಾದರೂ ಅನ್ನಿಸಿದೆಯೇ?

ಖಂಡಿತ ಇಲ್ಲ, ಬದಲಾಗಿ ಅಭಿವ್ಯಕ್ತಗೊಳಿಸಬಹುದು ಎಂತಲೇ ಅಂದುಕೊಂಡಿದ್ದೇನೆ. ನಮ್ಮೊಳಗೊಂದು ಅಸೂಯೆ, ಪೈಪೋಟಿ ಇಲ್ಲದ ನಿಜವಾದ ಆನಂದದ ಅನುಭವವನ್ನು ಪಡೆಯಬಲ್ಲ ಮನಸ್ಸೊಂದಿರಬೇಕು. ಅದು ನಮ್ಮ ವ್ಯಕ್ತಿತ್ವವೇ ಆಗಿದ್ದರೆ ದೇಹ ಕೂಡ ನಮ್ಮ ಕೈಯಲ್ಲಿನ ಮಾಧ್ಯಮವಾಗಿ ಮಿಡಿಯುವುದನ್ನು ನಾವೇ ಅನುಭವಿಸಬಹುದು. ಅಂದರೆ ಸಂಗೀತಕ್ಕೆ “ವೀಣೆ’ ಇದ್ದ ಹಾಗೆ ನೃತ್ಯಕ್ಕೆ “ದೇಹ’. ಆನಂದವನ್ನು ಅನುಭವಿಸದ ಕೇವಲ “ಫಿಸಿಕಲ್‌ ಸ್ಕಿಲ…’ ಆದ ನೃತ್ಯ ಶೋಭಿಸದು.

ಪ್ರಸ್ತುತ, ಆಂಗಿಕ ಅಭಿನಯಕ್ಕಿಂತ ಅಲಂಕಾರಕ್ಕೇ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಅನಿಸುತ್ತಿದೆಯೇ?

ಹಾಗೇನಿಲ್ಲ, ಇವತ್ತಿಗೂ ಮಕ್ಕಳು ತುಂಬಾ ಸಿಂಪಲ್‌ ಆಗಿ ಅಲಂಕಾರ ಮಾಡಿಕೊಂಡು ಕಲೆಯ ಶ್ರೇಷ್ಠತೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಆಯಾ ನೃತ್ಯಕ್ಕೆ, ಸನ್ನಿವೇಶಕ್ಕೆ ತಕ್ಕ ಅಲಂಕಾರವಿದೆ. ಕೆಲವರು, ಕಲೆಯ ಅರಿವಿಲ್ಲದವರು ಆ ರೀತಿ ಮಾಡುತ್ತಿರಬಹುದು ಅಷ್ಟೇ. ಈಗಿನವರು ಫಿಸಿಕಲಿ ಸ್ಟ್ರಾಂಗ್‌. ಹಾಗೆಯೇ ಮಾನಸಿಕ “ತನ್ಮಯತೆ’ ಮತ್ತು ಕಲೆಯ ಬಗ್ಗೆ “ಗೌರವ’ ಬೇಕು. ಬಹಳ ಜನ ಇದನ್ನು ಮಾಡುತ್ತಿದ್ದಾರೆ.

ನಿಮ್ಮ ಗುರು ಪರಂಪರೆಯ ಯಾವುದನ್ನು ನಿಮ್ಮ ಶಿಷ್ಯರಿಗೆ ದಾಟಿಸಲು ಬಯಸುತ್ತೀರಿ?

ಇವತ್ತಿಗೂ ನಾನು ಮೊಟ್ಟಮೊದಲು ಹೇಳಿಕೊಡುವುದು ನನ್ನ ಗುರುಗಳಾದ ಕೇಶವ ಮೂರ್ತಿಗಳ “ಅಡವು’ಗಳನ್ನು. ವೆಂಕಟಲಕ್ಷ್ಮಮ್ಮನವರ “ಅಭಿನಯ’ ಕೌಶಲವನ್ನು. ಅವರಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಗಳಲ್ಲಿ ಅಪಾರ ಜ್ಞಾನ ಇತ್ತು. “ನೃತ್‌’ ಗಳನ್ನು ಕೂಡ ಹೇಳಿಕೊಡುತ್ತೇನೆ. ಕಾಲದ ಮಣಿತಗಳನ್ನು ತಾಳಿಕೊಳ್ಳಬಲ್ಲಷ್ಟು ಅವು ಗಟ್ಟಿಯಾಗಿವೆ. ಅವುಗಳ ಜೊತೆಗೆ ನಾನು ಕಂಪೋಸ್‌ ಮಾಡಿದ ಅನೇಕ ಹೊಸ ಮತ್ತು ಹಳೆಯ ಪ್ರಯೋಗಗಳನ್ನ ಅಭ್ಯಾಸ ಮಾಡಿಸುತ್ತೇನೆ. ಮೈಥಾಲಜಿ ಮತ್ತು ದೇಸಿ ಜ್ಞಾನ ಪರಂಪರೆಯ ಶಿಸ್ತಿನ ಭಾವನೆ ತುಂಬಾ ಮುಖ್ಯವೆನಿಸುತ್ತದೆ.

ಈ ವಾರದ ಅತಿಥಿ:

ಲಲಿತಾ ಶ್ರೀನಿವಾಸನ್‌

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಸಂದರ್ಶನ: ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ

 

Advertisement

Udayavani is now on Telegram. Click here to join our channel and stay updated with the latest news.

Next