Advertisement

ಸೆಂಟ್ರಲ್‌ ರೈಲು ನಿಲ್ದಾಣ: ಟೆಂಡರ್‌ನಲ್ಲೇ ಬಾಕಿಯಾದ 4ನೇ ಪ್ಲಾಟ್‌ಫಾರಂ  

09:58 PM Nov 18, 2019 | mahesh |

ಮಹಾನಗರ: ವಿಶ್ವದರ್ಜೆ ಎಂಬ ಕನಸಿನಲ್ಲೇ ಬಾಕಿಯಾದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅತ್ಯಂತ ಅಗತ್ಯವಿರುವ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಾಣ ಕೂಡ ಟೆಂಡರ್‌ನಲ್ಲಿ ಬಾಕಿಯಾಗಿದೆ!

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಿಸಬೇಕು ಎಂಬುದು ಬಹುವರ್ಷದ ಬೇಡಿಕೆ. ಇದಕ್ಕೆ ಕೆಲವು ವರ್ಷದ ಹಿಂದೆಯೇ ಮಂಜೂರಾತಿಯೂ ದೊರಕಿದೆ. ಬಳಿಕ ಟೆಂಡರ್‌ ಕೂಡ ಆಗಿ ಕೆಲಸ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಕಾಮಗಾರಿ ನಿಂತುಬಿಟ್ಟಿದೆ. ಆಡಳಿತ ನಡೆಸುವವರು ಮುತುವರ್ಜಿ ವಹಿಸದ ಹಿನ್ನೆಲೆಯಲ್ಲಿ ಈ ಯೋಜನೆ ಇಲ್ಲಿಗೆ ಗಗನ ಕುಸುಮ ಎಂಬಂತಾಗಿದೆ.

“ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ದಕ್ಷಿಣ ರೈಲ್ವೇ ವಿಭಾಗದವರು ಪದೇ ಪದೇ ಹೇಳುತ್ತಾರೆಯೇ ವಿನಾ ಕಾಮಗಾರಿ ಆರಂಭವಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಕಾಮಗಾರಿ ಈಗ ಆರಂಭಗೊಂಡರೂ ಅದು ಮುಕ್ತಾಯವಾಗಬೇಕಾದರೆ ಬರೋಬ್ಬರಿ 2 ವರ್ಷ ಅಗತ್ಯವಿದೆ!

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಎರಡು ಪ್ಲಾಟ್‌ಫಾರಂಗಳ ಅಗತ್ಯ ವಿರುವ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಅಭಿವೃದ್ಧಿ ಸಮಿತಿ ಕೆಲವು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿತ್ತು. ಇದಕ್ಕೆ 14 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಿದಾಗ, ರೈಲ್ವೇ ಸಚಿವಾಲಯ ಅದನ್ನು ತಿರಸ್ಕರಿಸಿತ್ತು. ಒಂದು ವರ್ಷದ ಬಳಿಕ 1 ಪ್ಲಾಟ್‌ಫಾರಂ ನಿರ್ಮಿಸಲು ಅವಕಾಶ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು. 7 ಕೋಟಿ ರೂ. ವೆಚ್ಚದ ಈ ಯೋಜನೆಗೆ ವರ್ಷದ ಹಿಂದೆ ಅನುಮೋದನೆ ಲಭಿಸಿತ್ತು. ಟೆಂಡರ್‌ ಕೂಡ ಪೂರ್ಣಗೊಂಡಿತ್ತು. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

“ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ ಫಾರ್ಮ್ ಖಾಲಿ ಇಲ್ಲ’ ಎಂಬ ಕಾರಣ ನೀಡಿ ಪ್ರಸ್ತುತ ಕಂಕನಾಡಿ, ನೇತ್ರಾವತಿ ಸೇತುವೆ ಸಮೀಪ ಕೆಲವು ರೈಲುಗಳನ್ನು ನಿಲ್ಲಿಸಲಾಗುತ್ತದೆ. ಮೂರು ಪ್ಲಾಟ್‌ ಫಾರಂಗಳಲ್ಲಿ ನಿಂತಿರುವ ರೈಲುಗಳು ಮುಂದಕ್ಕೆ ಚಲಿಸದೆ ಉಳಿದ ರೈಲುಗಳು ನಿಲ್ದಾಣ ಪ್ರವೇಶಿಸುವಂತಿಲ್ಲ. ಹೊಸ ಪ್ಲಾಟ್‌ ಫಾರಂ ಆದರೆ, ಮತ್ತೂಂದು ರೈಲು ನಿಲುಗಡೆಗೆ ಅವಕಾಶ ನೀಡುವುದರಿಂದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಜತೆಗೆ ಹೊಸ ರೈಲುಗಳ ಸೇವೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಆರಂಭಿಸಲೂ ಅವಕಾಶವಾಗುತ್ತದೆ.

Advertisement

ಮಲತಾಯಿ ಧೋರಣೆ
ಪ್ಲಾಟ್‌ಫಾರಂ ಇಲ್ಲ ಎಂಬ ನೆಪದಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಮಲತಾಯಿ ಧೋರಣೆಯನ್ನು ದಕ್ಷಿಣ ರೈಲ್ವೇ ವಿಭಾಗದವರು ಅನುಸರಿಸುತ್ತಿದ್ದಾರೆ. ನಾಲ್ಕನೇ ಪ್ಲಾಟ್‌ಫಾರಂ ಮಾಡಲು ಟೆಂಡರ್‌ ಆಗಿದ್ದರೂ ಇಲ್ಲಿಯವರೆಗೆ ಕಾಮಗಾರಿ ನಡೆಸಿಲ್ಲ. ಈ ಬಗ್ಗೆ ರೈಲ್ವೇ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ ಗಮನಕ್ಕೆ ಇತ್ತೀಚೆಗೆ ತರಲಾಗಿದೆ.
ಶೀಘ್ರದಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ನಡೆಸುವ ಭರವಸೆ ಅವರು ನೀಡಿದ್ದಾರೆ ಎಂಬುದು ರೈಲ್ವೇ ಹೋರಾಟಗಾರ ಹನುಮಂತ ಕಾಮತ್‌ ಅವರ ಅಭಿಪ್ರಾಯ.

ಫಿಟ್‌ಲೈನ್‌ ಸ್ಥಳಾಂತರವೇ ಆಗಿಲ್ಲ!
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ “ಫಿಟ್‌ ಲೈನ್‌'(ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ)ಇರುವ ಭಾಗದಲ್ಲಿ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಫಿಟ್‌ಲೆçನ್‌ ಅನ್ನು ಸದ್ಯ ಇರುವ ಭಾಗದಿಂದ ಬೇರೆಡೆಗೆ ಸ್ಥಳಾಂತರಿಸಬೇಕಾಗಿದೆ. ತುಸು ದೂರದಲ್ಲಿ ಸೂಕ್ತ ಸ್ಥಳಾವಕಾಶ ಇರುವುದರಿಂದ ಫಿಟ್‌ಲೈನ್‌ ಸ್ಥಳಾಂತರಕ್ಕೆ ಯೋಚಿಸಲಾಗಿದೆ. ಆದರೆ ಯೋಚನೆ ಇನ್ನೂ ಕಾಮಗಾರಿ ಹಂತಕ್ಕೆ ಬಂದಿಲ್ಲ. ಹೊಸ ಪ್ಲಾಟ್‌ಫಾರಂ ನಿರ್ಮಾಣವಾಗುವ ಮೊದಲು ಫಿಟ್‌ಲೆçನ್‌ ಕಾಮಗಾರಿ ಆಗಬೇಕಿದೆ. ಹೀಗಾಗಿ ಇದಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂಬ ಪ್ರಶ್ನೆ ರೈಲ್ವೇ ಪ್ರಯಾಣಿಕರದ್ದು.

ಪರಿಶೀಲಿಸಿ ಕ್ರಮ
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಾಣ ಯೋಜನೆ ಇದ್ದು, ಇದರ ಕಾಮಗಾರಿಯನ್ನು ಎರ್ನಾಕುಲಂನ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆ ನಡೆಸಲಿದೆ. ಅವರು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇದರ ಈಗಿನ ಬೆಳವಣಿಗೆ ಹಾಗೂ ಆವಶ್ಯಕತೆಯ ಬಗ್ಗೆ ಪರಿಶೀಲಿಸಲಾಗುವುದು.
 - ಪ್ರತಾಪ್‌ಸಿಂಗ್‌ ಶಮಿ, ವಿಭಾಗೀಯ ಪ್ರಬಂಧಕರು, ಫಾಲ್ಗಟ್‌ ರೈಲ್ವೇ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next