Advertisement

ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡ ನೆಲಸಮ ಕಾಮಗಾರಿ ಮರು ಆರಂಭ

10:58 AM Apr 15, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿದ್ದ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡವನ್ನು ಕೆಡಹಲು ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಹಳೆಯ ಮಾರ್ಕೆಟ್‌ನ ಬಾಕಿ ಇರುವ ಕಟ್ಟಡವನ್ನು ಕೆಡಹುವ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದ್ದು, ಗುರು ವಾರ ದಿನಪೂರ್ತಿ ಕಾರ್ಯಾಚರಣೆ ನಡೆಯಿತು.

Advertisement

ಮುಂದಿನ ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಕಟ್ಟಡ ತೆರವು ಮಾಡುವ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯಾಚರಣೆಯ ಗುತ್ತಿಗೆ ವಹಿಸಿದ ಸಂಸ್ಥೆಯೇ ಕಟ್ಟಡ ತ್ಯಾಜ್ಯವನ್ನು ನಿರ್ವಹಣೆ ಮಾಡಲಿದೆ.

ನಗರದ ಅಧಿಕ ವಾಹನ, ಜನದಟ್ಟಣೆ ಇರುವ ಸ್ಥಳದಲ್ಲಿ ಕಟ್ಟಡ ತೆರವು, ಕಟ್ಟಡ ತ್ಯಾಜ್ಯ ತೆರವು ಮಾಡುವ ಕಾರಣದಿಂದ ಮಾರ್ಕೆಟ್‌ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಂಡಿದೆ. ಮುಂದಿನ ನಾಲ್ಕೈದು ದಿನವೂ ಇಂತಹ ಪರಿಸ್ಥಿತಿ ಇರಲಿದೆ.

ತಡೆಯಾಜ್ಞೆ ಸೋಮವಾರವೇ ತೆರವು ಗೊಂಡಿದ್ದರೂ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಕ್ರಮ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿರಲಿಲ್ಲ ಎನ್ನಲಾಗಿದೆ. ಬುಧವಾರ ರಾತ್ರಿ 8ರ ಬಳಿಕ ಕಾರ್ಯಾಚರಣೆಗೆ ನಿರ್ಧರಿಸಲಾಗಿತ್ತಾದರೂ ಮಳೆಯ ಹಿನ್ನೆಲೆ ಯಲ್ಲಿ ಸಾಧ್ಯವಾಗಿರಲಿಲ್ಲ. ಮಳೆ ನಿಂತ ಅನಂತರ ಕಾರ್ಯಾಚರಣೆ ಆರಂಭಿಸಲಾಗಿದೆ. ಗುರುವಾರವೂ ಬೆಳಗ್ಗಿನಿಂದಲೇ ಕಾರ್ಯಾ ಚರಣೆ ನಡೆಸಲಾಗಿದ್ದು, ಸೆಂಟ್ರಲ್‌ ಮಾರುಕಟ್ಟೆ ಪ್ರವೇಶಕ್ಕೆ ಇದ್ದ ರಸ್ತೆ ಬಂದ್‌ ಮಾಡಿ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು.

ದ್ವಿಚಕ್ರ ವಾಹನದವರು, ಪಾದಚಾರಿಗಳು ಸ್ಥಳ ಮಾಡಿಕೊಂಡು ಮಾರ್ಕೆಟ್‌ ವ್ಯಾಪ್ತಿಯಲ್ಲಿ ತೆರಳುವಂತಾಯಿತು. ಬೀದಿ ಬದಿ ವ್ಯಾಪಾರಕ್ಕೆ ಮಾತ್ರ ಯಾವುದೇ ಸಮಸ್ಯೆ ಇರಲಿಲ್ಲ.

Advertisement

62 ವರ್ಷ ಹಿಂದಿನ ಕಟ್ಟಡ

ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡಕ್ಕೆ (ತರಕಾರಿ/ ಹಣ್ಣು ಹಂಪಲು ಮತ್ತು ಮೀನು/ ಮಾಂಸದ ಮಾರ್ಕೆಟ್‌ನ 2 ಕಟ್ಟಡಗಳು) ಸುಮಾರು 62 ವರ್ಷಗಳ ಇತಿಹಾಸವಿದೆ. ಹಳೆಯದಾದ ಈ ಕಟ್ಟಡ ಶಿಥಿಲವಾಗಿತ್ತು. ಇಲ್ಲಿರುವ ಮೀನು/ ಮಾಂಸದ ಮಾರ್ಕೆಟ್‌ ಕಟ್ಟಡದ ಕೆಲವು ಭಾಗಗಳು ಕೆಲವು ವರ್ಷಗಳ ಹಿಂದೆಯೇ ಕುಸಿದಿದ್ದು, ಬಳಿಕ ಅದಕ್ಕೆ ತೇಪೆ ಹಚ್ಚಲಾಗಿತ್ತು. ಬಳಿಕ ಮಾರುಕಟ್ಟೆಯನ್ನು ಆಧುನೀಕರಿಸಬೇಕಾಗಿ ಬಂದಿರುವ ಕಾರಣ ಸ್ಮಾರ್ಟ್‌ ಸಿಟಿ ಯೋಜನೆಯಡಿ ನೂತನ ಮಾರ್ಕೆಟ್‌ ಕಟ್ಟಡವನ್ನು ಕಟ್ಟಿಸಲು 2016 ಜೂ. 29ರಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಬಳಿಕ ಸ್ಮಾರ್ಟ್‌ ಸಿಟಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. 2018 ಸೆ. 22ರಂದು ನಡೆದ ಉನ್ನತಾಧಿಕಾರ ಸ್ಟಿಯರಿಂಗ್‌ ಕಮಿಟಿ ಸಭೆಯಲ್ಲಿ ಮಂಜೂರಾತಿ ನೀಡಲಾಗಿತ್ತು. ಬಳಿಕ ಟೆಂಡರ್‌ ಪ್ರಕ್ರಿಯೆಯೂ ಮುಗಿದು, ಪಿಪಿಪಿ ಪಾಲುದಾರಿಕೆಯನ್ನೂ ಅಂತಿಮಗೊಳಿಸಲಾಗಿತ್ತು.

ಈ ಮಧ್ಯೆ ಕೊರೊನಾ ತೀವ್ರವಾದಾಗ 2020 ಎ. 2ರಂದು ಕಟ್ಟಡ ಪುನಃ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದು ಮಾರ್ಕೆಟ್‌ನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಷೇಧಿಸಿ, ಶಿಥಿಲವಾದ ಹಳೆಯ ಕಟ್ಟಡವನ್ನು ಕೆಡಹಲು ನಿರ್ಧರಿಸಿ ಎ. 4ರಂದು ಸಾರ್ವಜನಿಕ ಪ್ರಕಟನೆ ಹೊರಡಿಸಿತ್ತು. ಕೆಡಹುವ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಇದನ್ನು ಆಕ್ಷೇಪಿಸಿ ಕೆಲವು ಮಂದಿ ವ್ಯಾಪಾರಿಗಳು ಹೈಕೋರ್ಟ್‌ ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ 29ರಂದು ಕಾಮಗಾರಿ ನಿಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ತಡೆಯಾಜ್ಞೆ ತೆರವು ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಶೀಘ್ರ ಹೊಸ ಮಾರ್ಕೆಟ್‌

ಹಳೆಯ ಸೆಂಟ್ರಲ್‌ ಮಾರ್ಕೆಟ್‌ ಕೆಡಹುವ ಕಾಮಗಾರಿ ಪೂರ್ಣವಾದ ಬಳಿಕ ಅದೇ ಸ್ಥಳದಲ್ಲಿ ಹೊಸ ಮಾರುಕಟ್ಟೆಯನ್ನು ಸ್ಮಾರ್ಟಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತದೆ. ಈಗಾಗಲೇ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್‌ ಕೂಡ ಅಂತಿಮಗೊಂಡಾಗಿದೆ. ಅವರ ಜತೆಗೆ ಮಾತುಕತೆ ನಡೆಸಿ ಕಾಮಗಾರಿ ಆರಂಭಕ್ಕೆ ನಿರ್ಧರಿಸಲಾಗುವುದು. – ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next