ಹೊಸದಿಲ್ಲಿ: 2022ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಹಾಗೂ ಸಿದ್ದಾಪುರ ತಮ್ಮಣ್ಣ ಬೀಗಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ.
ಸಿದ್ದಾಪುರದ ತಮ್ಮಣ್ಣ ಬೀಗಾರ ಅವರ “ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿ ದೊರಕಿದೆ.
ತಮ್ಮಣ್ಣ ಬೀಗಾರ ಎನ್ನುವ ಕಾವ್ಯನಾಮದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ತಮ್ಮಣ್ಣ ಕೋಮಾರ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿ ಈಗ ಸಿದ್ದಾಪುರದಲ್ಲಿ ವಾಸವಾಗಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಮ್ಮಣ್ಣ ಬೀಗಾರ ಚಿತ್ರ ಹಾಗೂ ವ್ಯಂಗ್ಯ ಚಿತ್ರಕಾರರು ಕೂಡ. ಎರಡು ಮಕ್ಕಳ ಕಾದಂಬರಿ ಸೇರಿ 27 ಮಕ್ಕಳ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಈವರೆಗೆ ಪ್ರಕಟಿಸಿದ್ದಾರೆ. ಈ ಹಿಂದೆ ಅವರ ಕೃತಿಗಳಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ದೊರಕಿದ್ದು, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ರಾಷ್ಟ್ರ ಮಟ್ಟದ ಶಿಕ್ಷಕರ ಪ್ರಶಸ್ತಿ ದೊರಕಿದೆ.
ದಾದಾಪೀರ್ ಜೈಮನ್ ಅವರ `ನೀಲಕುರಿಂಜಿ’ ಕಥಾ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ ಬಂದಿದ್ದು, ರಾಯಚೂರು ಜಿಲ್ಲೆಯ ಕೆ.ಗುಡದಿನ್ನಿಯ ವೈಷ್ಣವಿ ಪ್ರಕಾಶನವು ಇವರ ನೀಲಕುರಿಂಜಿ ಕಥೆಗಳ ಪುಸ್ತಕವನ್ನು ಪ್ರಕಟಿಸಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಸಂತಸ ಹಂಚಿಕೊಂಡಿರುವ ಯುವ ಸಾಹಿತಿ ದಾದಾಪೀರ್ ಜೈಮನ್, ಪ್ರಶಸ್ತಿ ಬಂದಿರುವುದು ನಿಜಕ್ಕೂ ಸಂತಸ ಮತ್ತು ಆಶ್ಚರ್ಯ ಮೂಡಿಸಿದೆ. ಮೂಲತಃ ಹಗರಿಬೊಮ್ಮನಹಳ್ಳಿ ಪಟ್ಟಣದವನಾದ ನಾನು, ಅಲ್ಲಿನ ರಾಷ್ಟ್ರೋತ್ಥಾನ ಪ್ರೌಢಶಾಲೆಯಲ್ಲಿ 2008 ರಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡಿದ್ದೇನೆ. ಬಳಿಕ ಪಿಯುಸಿ ಸೇರಿದಂತೆ ಉನ್ನತ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದ್ದೇನೆ. ಪ್ರಸ್ತುತ ಬೆಂಗಳೂರಿನ ಸೆಂಟ್ ಕ್ಯಾಥರಿನ್ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕನಾಗಿದ್ದೇನೆ. ಗಣಿತದಲ್ಲಿ ಎಂಎಸ್ಸಿ ಸ್ನಾತಕ ಪದವಿ ಮುಗಿಸಿದ್ದೇನೆ. ಹವ್ಯಾಸಕ್ಕೆ ಕಥೆಗಳನ್ನು ಬರೆಯುತ್ತಿದ್ದೆ. ಕಳೆದ ವರ್ಷ ನಾನು ಬರೆದ ಕಥೆಗಳನ್ನು ರಾಯಚೂರಿನ ವೈಷ್ಣವಿ ಪ್ರಕಾಶನದ ಮುದಿರಾಜ ಬಾಣದ ಅವರು `ನೀಲಕುರಿಂಜಿ’ ಪುಸ್ತಕವನ್ನು ಪ್ರಕಟಿಸಿದ್ದರು ಎಂದು ತಿಳಿಸಿದರು.
ಪ್ರಶಸ್ತಿ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದ ಅವರು, ಪ್ರಶಸ್ತಿಯಿಂದಾಗಿ ನನ್ನನ್ನು ಸಾಹಿತ್ಯದೆಡೆಗೆ ಮತ್ತಷ್ಟು ಆಸಕ್ತಿ ಮೂಡಿಸಿದೆ. ಬರವಣಿಗೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಈ ಕೊಡುಗೆ ನನ್ನ ಕುಟುಂಬದವರಿಗೆ ಸಲ್ಲಬೇಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಪ್ರಶಸ್ತಿಯು 50 ಸಾವಿರ ರೂ. ಹಾಗೂ ಸನ್ಮಾನ ಒಳಗೊಂಡಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.