ಹುಬ್ಬಳ್ಳಿ: ಅಫ್ಘಾನಿಸ್ಥಾನದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿನ ಭಾರತೀಯ ವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯರ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ. ಅಲ್ಲಿಯ ಜನರ ಜೀವನ ಕಾಪಾಡುವುದು ಅತ್ಯವಶ್ಯಕವಿದೆ. ಅಮೆರಿಕಾ ಸರ್ಕಾರ ಜನರ ರಕ್ಷಣೆ ಬಗ್ಗೆ ಕಾಳಜಿ ತೋರಬೇಕು ಎಂದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗುವುದು. ವಾರ್ಡ್ ಅಧ್ಯಕ್ಷರ ಮೂಲಕ ಬರುವ ಆಕಾಂಕ್ಷಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಆಕಾಂಕ್ಷಿಗಳು ಇಂದು ಸಂಜೆಯೊಳಗೆ ಅರ್ಜಿಗಳನ್ನು ವಾರ್ಡ್ ಅಧ್ಯಕ್ಷರಿಗೆ ಸಲ್ಲಿಸಬೇಕು. ಅವರು ಅರ್ಜಿಗಳನ್ನು ಮಂಡಲ ಅಧ್ಯಕ್ಷರಿಗೆ ನೀಡುತ್ತಾರೆ. ಅವರು ಅವುಗಳನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡುತ್ತಾರೆ. ಗುರುವಾರ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದರು.
ಇದನ್ನೂ ಓದಿ:ಅಫ್ಘಾನ್ ವಲಸಿಗರು ಮತ್ತೆ ಅತಂತ್ರ: ಟರ್ಕಿಯಿಂದ 295 ಕಿಲೋ ಮೀಟರ್ ಬೃಹತ್ ಗೋಡೆ ನಿರ್ಮಾಣ!
ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಅಸ್ತಿತ್ವದಲ್ಲಿಲ್ಲ. ಅದರ ಅಸ್ತಿತ್ವ ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದೆ. ಬಿಜೆಪಿಯಲ್ಲಿ ಟಿಕೆಟ್ ಗೆ ಅರ್ಜಿ ಪಡೆಯಲು ಶುಲ್ಕ ಪಡೆಯಲಾಗುತ್ತಿಲ್ಲ. ಕಾಂಗ್ರೆಸ್ ನಂತೆ ಅರ್ಜಿಯಿಂದ ಹಣ ಮಾಡುವ ಅನಿವಾರ್ಯತೆ ನಮ್ಮ ಪಕ್ಷಕ್ಕೆ ಇಲ್ಲ ಎಂದು ಜೋಶಿ ತಿಳಿಸಿದರು.