Advertisement

ಕಲ್ಲಿದ್ದಲು ವಲಯ ಇನ್ನು ಅನ್‌ಲಾಕ್‌ ; ಇ-ಹರಾಜು ಪ್ರಕ್ರಿಯೆಗೆ ಪ್ರಧಾನಿ ಮೋದಿ ಚಾಲನೆ

12:20 AM Jun 20, 2020 | Hari Prasad |

ಹೊಸದಿಲ್ಲಿ: ಕಲ್ಲಿದ್ದಲು ವಲಯವನ್ನು ವಾಣಿಜ್ಯ ಗಣಿಗಾರಿಕೆಗೆ ಮುಕ್ತವಾಗಿಸುವ ಮೂಲಕ ಕ್ಷೇತ್ರದಲ್ಲಿ ದಶಕಗಳಿಂದ ಜಾರಿ­ಯಲ್ಲಿದ್ದ ಲಾಕ್‌ಡೌನ್‌ ಅನ್ನು ಅನ್‌ಲಾಕ್‌ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಕೋವಿಡ್ ವೈರಸ್‌ ಸೋಂಕಿನಿಂದಾಗಿ ಸೊರಗಿರುವ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ರೂಪಿಸಿರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಿ, 41 ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಗಣಿಗಾರಿಕೆಗೆ ಮುಕ್ತವಾಗಿಸುವ ಎರಡು ಹಂತದ ಇ-ಹರಾಜು ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮಲ್ಲಿರುವ ನಿಕ್ಷೇಪಗಳ ಆಧಾರದಲ್ಲಿ ನೋಡುವುದಾದರೆ, ಕಲ್ಲಿದ್ದಲು ರಫ್ತು ಮಾಡುವ ವಿಶ್ವದ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುವ ಸಂಪೂರ್ಣ ಸಾಮರ್ಥ್ಯ ಭಾರತಕ್ಕಿದೆ. ಆ ವಿಕ್ರಮವನ್ನು ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಗಣಿಗಾರಿಕೆಗೆ ಮುಕ್ತ­ಗೊ­ಳಿಸಲಾಗಿದೆ. ಇದರಿಂದಾಗಿ ಮುಂದಿನ 5ರಿಂದ 7 ವರ್ಷಗಳ ಅವಧಿ­ಯಲ್ಲಿ ದೇಶಕ್ಕೆ 33,000 ಕೋಟಿ ರೂ. ಬಂಡ­ವಾಳ ಹರಿದುಬರುವ ನಿರೀಕ್ಷೆಯಿದೆ’ ಎಂದು ಪ್ರಧಾನಿ ಹೇಳಿದರು.

ಕಲ್ಲಿದ್ದಲು ನಿಕ್ಷೇಪಗಳ ಆಧಾರದಲ್ಲಿ ದೇಶವು ಪ್ರಸ್ತುತ ಜಗತ್ತಿನ ನಾಲ್ಕನೇ ಅತಿ ದೊಡ್ಡ ದೇಶ ಎನಿಸಿಕೊಂಡಿದ್ದು, ಉತ್ಪಾದ­ನೆ­ಯಲ್ಲಿ ಎರಡನೇ ಬೃಹತ್‌ ರಾಷ್ಟ್ರವಾ­ಗಿದೆ. ಇದೇ ವೇಳೆ ಕಲ್ಲಿದ್ದಲನ್ನು ಆಮದು ಮಾಡಿ­ಕೊಳ್ಳುವ 2ನೇ ದೊಡ್ಡ ದೇಶವಾ­ಗಿಯೂ ನಾವು ಗುರುತಿಸಿಕೊಂಡಿದ್ದೇವೆ ಎಂದರು.

20,000 ಕೋಟಿ ರೂ. ಹೂಡಿಕೆ: 2030ರ ವೇಳೆಗೆ ಸುಮಾರು 20,000 ಕೋಟಿ ರೂ. ಹೂಡಿಕೆಯೊಂದಿಗೆ 10 ಕೋಟಿ ಟನ್‌ ಕಲ್ಲಿದ್ದಲನ್ನು ಅನಿಲವನ್ನಾಗಿ ಮಾರ್ಪಡಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಯೋಜನೆಗಳನ್ನು ಗುರುತಿಸಿಸಲಾಗಿದೆ ಎಂದರು.

Advertisement

ಕೋವಿಡ್ ಒಂದು ಅವಕಾಶ
‘ಕೋವಿಡ್ ವೈರಸ್‌ ಸೋಂಕು ಭಾರ­ತೀಯರಿಗೆ ಸ್ವಾವಲಂಬನೆಯ ಪಾಠ ಕಲಿಸಿದೆ. ಹೀಗಾಗಿ ಕೋವಿಡ್ ಪರಿಸ್ಥಿತಿಯನ್ನು ದೇಶದ ಅಭಿವೃದ್ಧಿಯ ಅವ­ಕಾಶವನ್ನಾಗಿ ಬಳಸಿಕೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ ಪ್ರಧಾನಿ, ಕೆಲವೇ ತಿಂಗಳ ಹಿಂದೆ ಎನ್‌-95 ಮಾಸ್ಕ್ ಗಳು, ಕೋವಿಡ್ ಪರೀಕ್ಷೆ ಕಿಟ್‌, ಪಿಪಿಇ ಕಿಟ್‌ಗಳು ಹಾಗೂ ವೆಂಟಿಲೇಟರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ನಾವು, ಇಂದು ಮೇಕ್‌ ಇನ್‌ ಇಂಡಿಯಾ ನೆರವಿ­ನಿಂದ ಅವೆಲ್ಲವನ್ನೂ ನಮ್ಮಲ್ಲೇ ಉತ್ಪಾದಿ­ಸುತ್ತಿದ್ದೇವೆ. ಅಷ್ಟೇ ಅಲ್ಲ, ಮಾಸ್ಕ್, ಕಿಟ್‌ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಹಂತ ತಲುಪಿದೆ. ಭಾರತ ಈ ಹಿಂದೆ ಕೂಡ ಅತ್ಯಂತ ದೊಡ್ಡ ಹಾಗೂ ಕ್ಲಿಷ್ಟಕರ ಸಂದರ್ಭಗಳನ್ನು ಗೆದ್ದು ಮೇಲೆದ್ದಿದೆ. ಹಾಗೇ ಕೊರೊನಾ ಒಡ್ಡಿರುವ ಸವಾ­ಲನ್ನೂ ಯಶಸ್ವಿಯಾಗಿ ಮೆಟ್ಟಿನಿಲ್ಲುವುದು ಕೂಡ ಖಚಿತ ಎಂದರು.

ಉತ್ಪಾದನೆ ಸಾಮರ್ಥ್ಯ ಹೆಚ್ಚಳ: ಪ್ರಹ್ಲಾದ್‌ ಜೋಶಿ
ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ‘ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯವನ್ನು 100 ಕೋಟಿ ಟನ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ 50,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು.

100 ವರ್ಷಗಳಿಗಾಗುವಷ್ಟು ಕಲ್ಲಿದ್ದಲು ನಿಕ್ಷೇಪಗಳು ಸಿಐಎಲ್‌ ಬಳಿ ಇವೆ. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಉತ್ಪಾದನೆ ಹೆಚ್ಚಿಸಲು ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಕ್ರಮ ಕೈಗೊಳ್ಳಲಿದೆ. ಸರಕಾರದ ಪ್ರಯತ್ನದಿಂದ ಕಲ್ಲಿದ್ದಲು ಕ್ಷೇತ್ರವು ದೇಶದ ಆರ್ಥಿಕತೆಗೆ ಕೊಡುಗೆ ನೀಡಲಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next