ನವದೆಹಲಿ: ಭ್ರಷ್ಟ ಹಾಗೂ ಆಲಸಿತನ ಹೊಂದಿರುವ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಡಿಸಲು ಕೇಂದ್ರ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಭ್ರಷ್ಟ ಅಧಿಕಾರಿಗಳನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಿತ್ತು.
ಅಲ್ಲದೇ ಎಫ್ ಆರ್ 56(ಜೆ)/ಕಾಯ್ದೆ 48ರ ಸಿಸಿಎಸ್ (ಪಿಂಚಣಿ)ಕಾಯ್ದೆ 1972ರ ಪ್ರಕಾರ 50 ವರ್ಷ ಮೇಲ್ಪಟ್ಟ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿ ವಿವರಿಸಿದೆ. ಇದರಲ್ಲಿ ಎ, ಬಿ ಮತ್ತು ಸಿ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ.
ದೇಶಾದ್ಯಂತ ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆ ಜಾರಿಯಾಗಲು ಸ್ವಲ್ಪ ವಿಳಂಬವಾಗುತ್ತಿದೆ, ಈ ಬಗ್ಗೆ ಕ್ರಮಕೈಗೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ತಂಡವೊಂದನ್ನು ರಚಿಸಿರುವುದಾಗಿ ವರದಿ ತಿಳಿಸಿದೆ.
ಕಾಯ್ದೆಯ ಪ್ರಕಾರ, 30 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಮತ್ತು 50ವರ್ಷಕ್ಕಿಂತ ಮೇಲ್ಪಟ್ಟವರು ಸೇವೆಯಿಂದ ನಿವೃತ್ತಿಯಾಗಬೇಕು. ಅಷ್ಟೇ ಅಲ್ಲ ಭ್ರಷ್ಟ, ಆಲಸಿ ಹಾಗೂ ನಿರಂತರ ಗೈರಾಗುತ್ತಿರುವ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯಾಗುವಂತೆ ಸೂಚಿಸಲಾಗುತ್ತದೆ ಎಂದು ವರದಿ ಹೇಳಿದೆ.
ಒಂದು ವೇಳೆ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಸಾಬೀತಾದರೆ, ಅವರಿಗೆ ಮೂರು ತಿಂಗಳ ಸಂಬಳದ ಭತ್ಯೆ ನೀಡಿ ಸೇವೆಯಿಂದ ವಜಾಗೊಳಿಸಲಾಗುವುದು. ಅಲ್ಲದೇ ಭ್ರಷ್ಟ, ಚುರುಕು ರಹಿತ ಮತ್ತು ಅಸಮರ್ಥ ಅಧಿಕಾರಿಳಿಗೆ ದಂಡ ವಿಧಿಸಲಾಗುವುದು ಎಂದು ವರದಿ ತಿಳಿಸಿದೆ.
ಈಗಾಗಲೇ ಹಲವಾರು ರಾಜ್ಯ ಸರ್ಕಾರಗಳು ಕೂಡಾ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಆರಂಭಿಸಿವೆ. ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರ ಕೂಡಾ ಒಂದು ಸಾವಿರ ಮಂದಿ ಭ್ರಷ್ಟ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಮನೆಗೆ ಕಳುಹಿಸಿತ್ತು.