Advertisement

ಕೇಂದ್ರ ಸರಕಾರ ಒಂದು ಪೈಸೆಯೂ GST ಬಾಕಿ ಉಳಿಸಿಕೊಂಡಿಲ್ಲ:  ಕೇಂದ್ರ ಸಚಿವ ಭೂಪೇಂದ್ರ ಯಾದವ್‌

12:08 AM Jan 28, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರವು ರಾಜ್ಯದ ಜಿಎಸ್‌ಟಿ ಮೊತ್ತವನ್ನು ಬಾಕಿ ಇರಿಸಿಕೊಂಡಿದೆ ಎಂದು ಪದೇಪದೆ ಆರೋಪಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ತಿರುಗೇಟು ನೀಡಿದ್ದು, ರಾಜ್ಯದ ಒಂದು ಪೈಸೆಯನ್ನೂ ಕೇಂದ್ರ ಸರಕಾರ ಇದುವರೆಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗಿದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಳ್ಳು (ಜ್ಯೂಟ್‌ )ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಸುಳ್ಳು ಬಹು ದಿನಗಳ ಕಾಲ ನಡೆಯದು ಎಂಬುದಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ್‌ದ ಫ‌ಲಿತಾಂಶವೇ ಸಾಕ್ಷಿ. ಮೋದಿ ಗ್ಯಾರಂಟಿಯೊಂದೇ ನಿಜವಾದ (ಸಚ್ಚಿ) ಗ್ಯಾರಂಟಿ ಎಂದು ವ್ಯಾಖ್ಯಾನಿಸಿದರು.

ಸುಳ್ಳು ಗ್ಯಾರಂಟಿಯ ಜತೆಗೆ ಕೇಂದ್ರ ಸರಕಾರದ ವಿರುದ್ಧ ಸುಳ್ಳು ಆಪಾದನೆಯನ್ನೂ ಕರ್ನಾಟಕ ಸರಕಾರ ಮಾಡುತ್ತಿದೆ. 2009ರಿಂದ 2014ರ ವರೆಗೆ ಅಂದಿನ ಕೇಂದ್ರ ಸರಕಾರ 11 ಸಾವಿರ ಕೋಟಿ ರೂ. ನೀಡಿದ್ದರೆ ಮೋದಿ ಸರಕಾರದ ಅವಧಿಯಲ್ಲಿ 30 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಆದರೆ ರಾಜ್ಯ ಈ ವಿಚಾರವನ್ನು ಮುಚ್ಚಿಟ್ಟಿದೆ. ಹಣ ಇಲ್ಲ ಎಂಬ ಕಾರಣ ನೀಡಿ ಸಾಹಿತ್ಯ ಸಮ್ಮೇಳನ ಆಯೋಜನೆಯನ್ನೇ ಕರ್ನಾಟಕ ಸರಕಾರ ನಿಲ್ಲಿಸಿದೆ ಎಂದು ಟೀಕಿಸಿದರು.

ಬಡವರ ಕಲ್ಯಾಣ ಮತ್ತು ಆದರ್ಶ ರಾಮರಾಜ್ಯದ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯವರು 2014ರಿಂದ ಕಾರ್ಯ ನಿರ್ವಹಿಸುತ್ತಿದ್ಧಾರೆ. ಜನ್‌ಧನ್‌ ಖಾತೆಗಳನ್ನು ತೆರೆಯಲು ಸೂಚಿಸಿದ ಪ್ರಧಾನಿಯವರು ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದರು. ಜಿಎಸ್ಟಿ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರದ ಬಿಜೆಪಿ ಸರಕಾರ ಮುಂದಾದರೆ, ಕಾಂಗ್ರೆಸ್ಸಿಗರು ಸಂಸತ್‌ ಅಧಿವೇಶನವನ್ನೇ ಬಹಿಷ್ಕರಿಸಿದರು ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next