Advertisement

ಕೋವಿಡ್ ನಿರ್ವಹಣೆಗೆ ಸಂಪೂರ್ಣ ಸಹಕಾರ : ರಾಜ್ಯ ಸರಕಾರಕ್ಕೆ ಕೇಂದ್ರದ ಭರವಸೆ

08:49 PM Apr 25, 2021 | Team Udayavani |

ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಅಗತ್ಯವಾದ ಔಷಧ, ಲಸಿಕೆ, ಆಮ್ಲಜನಕ ಪೂರೈಕೆ ಸೇರಿದಂತೆ ಎಲ್ಲ ನೆರವು ನೀಡುವುದಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದೆ.

Advertisement

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಅವರು ವಿಧಾನ ಸೌಧದಲ್ಲಿ ಇಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್, ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಮುಖ್ಯಮ‍ಂತ್ರಿಯವರ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಪರಿಣಾಮಕಾರಿಯಾಗಿ ಕೊರೊನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಾಂಕ್ರಾಮಿಕವನ್ನು ಮಣಿಸಲು ಎಲ್ಲರೂ ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಿದೆ. ರಾಜ್ಯಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರವು ಸದಾ ಸಿದ್ಧವಿದೆ. ಕೊರೊನಾ ಪರಿಸ್ಥಿತಿ ಬಗ್ಗೆ, ತುರ್ತು ನೆರವಿನ ಬಗ್ಗೆ, ರೆಮ್ಡೆಸಿವರ್ ಮತ್ತಿತರ ಔಷಧಿಗಳ ಅಗತ್ಯತೆ ಬಗ್ಗೆ ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಿ. ರಾಜ್ಯಕ್ಕೆ ಅಗತ್ಯ ನೆರವು ಒದಗಿಸುವುದಕ್ಕಾಗಿಯೇ ದೆಹಲಿಯ ತಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದಾಗಿ ಸಚಿವರು ಹೇಳಿದರು.

ಇದನ್ನೂ ಓದಿ :ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಗೂ ಆ್ಯಂಬ್ಯುಲೆನ್ಸ್ ಸೇವೆ : ಡಿಸಿಎಂ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ – ರಾಜ್ಯಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ ಕನಿಷ್ಠ ಪಕ್ಷ 1 ಲಕ್ಷ ರೆಮ್ಡೆಸಿವರ್ ವಯಲ್ಸ್ ಬೇಕು ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಈಗ 1.22 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದೆ. ಅದೇ ರೀತಿ 800 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Advertisement

ರಾಜ್ಯವೊಂದರಲ್ಲಿ ಕೊರೊನಾ ಸೋಂಕಿತರು ಬಳಸುವ ಆಮ್ಲಜನಕ ಪ್ರಮಾಣಕ್ಕೆ ಅನುಗುಣವಾಗಿ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗುತ್ತಿತ್ತು. ಹೀಗಾಗಿ ರಾಜ್ಯಕ್ಕೆ ಆರಂಭದಲ್ಲಿ ಕೇವಲ 25 ಸಾವಿರ ವಯಲ್ಸ್ ಹಂಚಿಕೆಯಾಗಿತ್ತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೆಚ್ಚಿನ ವಯಲ್ಸ್ ಹಂಚಿಕೆಗೆ ಬೇಡಿಕೆ ಇಟ್ಟಿದ್ದರು. ನಂತರ ತಮ್ಮ ಮಧ್ಯಪ್ರವೇಶದಿಂದ ಮತ್ತೆ 25 ಸಾವಿರ ವಯಲ್ಸ್ ಒದಗಿಸಲಾಗಿತ್ತು. ಆಮ್ಲಜನಕ ಬಳಕೆ ಪ್ರಮಾಣ ಮೇಲೆ ರೆಮ್ಡೆಸಿವರ್ ಪ್ರಮಾಣ ನಿಗದಿ ಮಾಡುವುದು ಸರಿಯಲ್ಲ. ಕೊರೊನಾ ಪೀಡಿತರ ಸಂಖ್ಯೆಯ ಮೇಲೆ ಇದರ ಹಂಚಿಕೆಯಾಗಬೇಕು ಎಂಬುದು ರಾಜ್ಯಗಳ ಹಾಗೂ ನಮ್ಮೆಲ್ಲರ ಅಭಿಪ್ರಾಯವಾಗಿತ್ತು. ನಿನ್ನೆ ಇದರ ಪ್ರಕಾರವೇ ರೆಮ್ಡೆಸಿವರ್ ಮರುಹಂಚಿಕೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next