Advertisement

ಕೇಂದ್ರ ಪ್ರವಾಹ ಅಧ್ಯಯನ ತಂಡದ ಅಧಿಕಾರಿಗಳ ಕಾಲಿಗೆ ಬಿದ್ದ ಸಂತ್ರಸ್ತರು

09:57 AM Aug 27, 2019 | keerthan |

ಬನಹಟ್ಟಿ/ಜಮಖಂಡಿ: ಭೀಕರ ಪ್ರವಾಹದಿಂದಾದ ಹಾನಿ ಅಧ್ಯಯನಕ್ಕೆ ಬಂದಿರುವ ಕೇಂದ್ರದ ಅಧಿಕಾರಿಗಳ ಕಾಲಿಗೆ ಬಿದ್ದ ಸಂತ್ರಸ್ತರು, ನಮ್ಮ ಗೋಳು ನೋಡ್ರಿ. ನಮ್ಗ ಇರಾಕ್ ಮನಿ ಕೊಡ್ರಿ ಎಂದು ಕಣ್ಣೀರಿಟ್ಟ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಪರಿಹಾರ ಕೇಂದ್ರದಲ್ಲಿ ನಡೆಯಿತು.

Advertisement

ಕೇಂದ್ರ ಗೃಹ ಇಲಾಖೆಯ ಪ್ರಕಾಶ ನೇತೃತ್ವದ ಅಧಿಕಾರಿಗಳ ತಂಡ, ಅಸ್ಕಿ ಪರಿಹಾರ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ, ಅವರ ಕಾಲಿಗೆ ಬಿದ್ದರು. ಇನ್ನೂ ಕೆಲವು ಮಹಿಳೆಯರು ಕಣ್ಣೀರು ಹಾಕಿ ಸಾಹೇಬ್ರ ನಮ್ಮ ಕಷ್ಟಾ ನೋಡ್ರಿ ಅಂದರು. ಮಹಿಳೆಯರೆಲ್ಲ ಕನ್ನಡದಲ್ಲಿ ಸಮಸ್ಯೆ ಹೇಳಿಕೊಳ್ಳುತ್ತಿದ್ದರು.

ಜಿಲ್ಲಾಧಿಕಾರಿ ರಾಮಚಂದ್ರನ್, ಹಿಂದಿಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಮನವಿ ಮಾಡಿದರು. ಆಗ ತೇರದಾಳ ಶಾಸಕ ಸಿದ್ದು ಸವದಿ, ಮಹಿಳೆಯರ ಅಳಲನ್ನು ಹಿಂದಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

ಸಂಕಷ್ಟದಲ್ಲೂ ಗೌರವ
ತಮ್ಮ ಸಮಸ್ಯೆ ಅರಿಯಲು ಬಂದಿದ್ದ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳನ್ನು ಅಸ್ಕಿ ಪರಿಹಾರ ಕೇಂದ್ರದ ಸಂತ್ರಸ್ತರು ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು.

ತರಾತುರಿ ಭೇಟಿ- ಆಕ್ರೋಶ
ಇದಕ್ಕೂ ಮುಂಚೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಹಾನಿ ವೀಕ್ಷಣೆಗೆ ತಂಡ ತೆರಳಿತು. 7:45 ನಿಮಿಷಕ್ಕೆ ಸೇತುವೆ ಬಳಿ ಬಂದಿಳಿದ ತಂಡ, ಕೇವಲ ಆರು ನಿಮಿಷದಲ್ಲಿ ಇಲ್ಲಿಂದ ತೆರಳಿತು. ಹಿರೇಪಡಸಲಗಿ, ಚಿಕ್ಕಪಡಸಲಗಿ, ಆಲಗೂರ, ಕುಂಬಾರಹಳ್ಳ ಸೇರಿ ತಾಲೂಕಿನ 27 ಹಳ್ಳಿ ಪ್ರವಾಹದಿಂದ ಮುಳಿಗಿದ್ದು ಯಾವ ಹಳ್ಳಿಗೂ ಭೇಟಿ ಕೊಡಲಿಲ್ಲ. ಮುಖ್ಯ ಹೆದ್ದಾರಿಯಿಂದ ಬಂದು, ಸೇತುವೆ ನೋಡಿ, ರಬಕವಿ- ಬನಹಟ್ಟಿ ತಾಲೂಕಿನ ಅಸ್ಕಿಗೆ ತೆರಳಿದರು. ತರಾತುರಿಯಲ್ಲಿ ಬಂದು ಹೋದ ಅಧ್ಯಯನ ತಂಡದ ವಿರುದ್ದ ಆಲಗೂರ ಮತ್ತು ಚಿಕ್ಕಪಡಸಲಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next