Advertisement

ಭವಿಷ್ಯ ನಿಧಿ ಖಾತೆದಾರರಿಗೆ ಈ ವರ್ಷ ಸಿಗಲಿದೆ 8.65% ಬಡ್ಡಿ

09:08 AM Sep 25, 2019 | Hari Prasad |

ನವದೆಹಲಿ: ದೇಶದಲ್ಲಿರುವ ಆರು ಕೋಟಿ ಭವಿಷ್ಯ ನಿಧಿ ಖಾತೆದಾರರಿಗೆ ಕೇಂದ್ರ ಸರಕಾರ ಸಿಹಿಸುದ್ದಿ ನೀಡಿದೆ. ಭವಿಷ್ಯ ನಿಧಿ ಖಾತೆದಾರರಿಗೆ 8.65 ಪ್ರತಿಶತ ಬಡ್ಡಿ ನೀಡುವ ಭವಿಷ್ಯ ನಿಧಿ ಆಡಳಿತ ಮಂಡಳಿ ಮಾಡಿರುವ ನಿರ್ಧಾರಕ್ಕೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ.

Advertisement

ಇ.ಪಿ.ಎಫ್.ಒ.ನ ಉನ್ನತ ನಿರ್ಣಯ ಸಮಿತಿ ಸದಸ್ಯರು ಕಳೆದ ಫೆಬ್ರವರಿ 21ರಂದು ಕಳೆದ ಹಣಕಾಸು ವರ್ಷದಲ್ಲಿ ಪಿ.ಎಫ್. ಖಾತೆದಾರರಿಗೆ 8.65 ಪ್ರತಿಶತ ಬಡ್ಡಿ ನೀಡಲು ತೀರ್ಮಾನ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೇಂದ್ರ ಕಾರ್ಮಿಕ ಸಚಿವರು ಮುಖ್ಯಸ್ಥರಾಗಿರುವ ಸಿಬಿಟಿಯು ಪ್ರಸಕ್ತ ಹಣಕಾಸು ವರ್ಷದ ಭವಿಷ್ಯ ನಿಧಿ ಖಾತೆಗೆ ಬಡ್ಡಿದರವನ್ನು ನಿಗದಿ ಮಾಡುವ ನಿರ್ಣಯವನ್ನು ಕೈಗೊಂಡ ಬಳಿಕ ಈ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ವರ್ಗಾಯಿಸಲಾಗಿತ್ತು. ಸಿಬಿಟಿಯ ಪ್ರಸ್ತಾವನೆ ಹಣಕಾಸು ಸಚಿವಾಲಯದ ಒಪ್ಪಿಗೆ ಪಡೆದುಕೊಂಡ ಬಳಿಕ ಭವಿಷ್ಯನಿಧಿ ಕಾರ್ಮಿಕರ ಖಾತೆಗಳಿಗೆ ಹೆಚ್ಚುವರಿ ಬಡ್ಡಿದರವನ್ನು ಜಮಾ ಮಾಡಲಾಗುವುದು.

2017-18ರ ಸಾಲಿನಲ್ಲಿ ಭವಿಷ್ಯ ನಿಧಿ ಖಾತೆದಾರರಿಗೆ 8.55% ಬಡ್ಡಿದರವನ್ನು ನಿಗದಿಪಡಿಸಲಾಗಿತ್ತು. ಮತ್ತು ಈ ಬಡ್ಡಿದರವು ಕಳೆದ ಐದು ವರ್ಷಗಳಲ್ಲೇ ಅತೀ ಕಡಿಮೆ ಬಡ್ಡಿದರ ಪ್ರಮಾಣವಾಗಿತ್ತು. 2015-16ನೇ ಸಾಲಿನಲ್ಲಿ ಇ.ಪಿ.ಎಪ್.ಒ. 8.8% ಬಡ್ಡಿದರವನ್ನು ನೀಡಿತ್ತು. 2013-14ರಲ್ಲಿ ಹಾಗೂ 2014-15ರಲ್ಲಿ 8.75% ಬಡ್ಡಿಯನ್ನು ಭವಿಷ್ಯನಿಧಿ ಖಾತೆ ಸದಸ್ಯರಿಗೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next