ಬೆಂಗಳೂರು: ಚುನಾವಣೆಗೆ ದಿನಗಣನೆ ಆರಂಭ ವಾಗಿರುವಂತೆಯೇ ಕೇಂದ್ರ ಚುನಾವಣ ಆಯೋಗ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿದೆ. ಇದರ ಭಾಗವಾಗಿ ಮುಖ್ಯ ಚುನಾವಣ ಆಯುಕ್ತರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಚುನಾವಣ ಆಯೋಗವು ಮಾ. 9ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ಕೊಡಲಿದೆ.
ಸಾಮಾನ್ಯವಾಗಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆಯುವ ರಾಜ್ಯಗಳಿಗೆ “ಪೂರ್ಣ ಆಯೋಗ’ (ಫುಲ್ ಕಮಿಷನ್) ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ದಿನಾಂಕ ಘೋಷಣೆಗೆ ಹಸುರು ನಿಶಾನೆ ಸಿಗುತ್ತದೆ. ಈ ಹಿನ್ನೆಲೆ ಯಲ್ಲಿ ಆಯೋಗದ ಭೇಟಿ ಮಹತ್ವದ್ದಾಗಿದೆ.
ಮುಖ್ಯ ಚು. ಆಯುಕ್ತ ರಾಜೀವ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಗದ ಹಿರಿಯ ಅಧಿಕಾರಿಗಳ ತಂಡ 9, 10 ಮತ್ತು 11ರಂದು ರಾಜ್ಯದಲ್ಲಿ ಇರಲಿದ್ದು, ಬೆಂಗಳೂರಿನಲ್ಲಿ ಸಿದ್ಧತೆಗಳ ಪರಿಶೀಲನೆ, ಸರಣಿ ಸಭೆಗಳು, ವಿಚಾರ ಸಂಕಿರಣ, ಮತದಾರರ ಜಾಗೃತಿ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಿದೆ.