Advertisement
ಕೇಂದ್ರ ಚುನಾವಣ ಆಯೋಗವು ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ವೇಳಾಪಟ್ಟಿ ಘೋಷಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಮಾದರಿ ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಿದ್ಧವಾಗಿರುವಂತೆ ಮುಖ್ಯ ಚುನಾವಣ ಅಧಿಕಾರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ. ರಾಜ್ಯ ವಿಧಾನಸಭೆಗೆ ಎಪ್ರಿಲ್ ಅಥವಾ ಮೇಯಲ್ಲಿ ಚುನಾವಣೆ ನಡೆಯಲಿದೆ.
Related Articles
Advertisement
ನೀತಿ ಸಂಹಿತೆ ಅನ್ವಯಗೊಳಿಸಲು ಅಗತ್ಯವಿರುವ ಎಲ್ಲಾ ಮಾಹಿತಿಗಳ ಕೈಪಿಡಿಗಳನ್ನು ಮುಖ್ಯ ಚುನಾವಣ ಅಧಿಕಾರಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಚುನಾವಣೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಭದ್ರತೆ ಹೆಚ್ಚಳ, ಮತದಾರರಿಗೆ ಆಮಿಷ ನೀಡದಂತೆ ಎಚ್ಚರಿಕೆ ವಹಿಸುವುದು, ಅಕ್ರಮವಾಗಿ ಹಣ, ಮದ್ಯ, ಉಡುಗೊರೆಗಳನ್ನು ಸಾಗಿಸುವುದಕ್ಕೆ ಕಡಿವಾಣ ಹಾಕುವುದು, ಸರಕಾರಿ ಕಚೇರಿಗಳಲ್ಲಿ ರಾಜಕೀಯ ಪಕ್ಷಗಳ ಸಭೆ ಸಮಾರಂಭ ನಡೆಸದಂತೆ ನೋಡಿಕೊಳ್ಳಬೇಕು ಹಾಗೂ ಅವುಗಳಿಗೆ ಅವಕಾಶವನ್ನೂ ನೀಡಬಾರದು. ಅಭ್ಯರ್ಥಿಗಳ ಖರ್ಚು ಮತ್ತು ವೆಚ್ಚಗಳ ಕುರಿತು ನಿಗಾ ಇಡುವುದು. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಸೇರಿ ನೀತಿ ಸಂಹಿತೆಯ ಅಂಶಗಳನ್ನು ಅನುಷ್ಠಾನಕ್ಕೆ ತರಲು ಈಗಿನಿಂದಲೇ ಜಿಲ್ಲಾ ಚುನಾವಣಾಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಸೂಚನೆ ನೀಡಿದೆ.