ವಿಜಯಪುರ: ಕಳೆದ ಬಾರಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ರೂಪವಾಗಿ ನಷ್ಟ ಭರಿಸಲು ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅನುದಾನ ನೀಡದೇ ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಎಸಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.
ತಮ್ಮ ಸ್ವಕ್ಷೇತ್ರ ಬಬಲೇಶ್ವರ ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಬೋಳಚಿಕ್ಕಲಕಿ-ಗುಣದಾಳ 3.8 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರವಾಹದಿಂದ 34 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ಕೇಂದ್ರ ಸರ್ಕಾರ 2000 ಕೋಟಿ ರೂ. ಮಾತ್ರ ಅನುದಾನ ನೀಡಿದೆ. 32 ಸಾವಿರ ಕೋಟಿ ರೂ. ನೀಡದ ಕೇಂದ್ರದ ವರ್ತನೆ ಕುರಿತು ಆಡಳಿತ ಪಕ್ಷದ ಯಾರೂ ಧ್ವನಿ ಎತ್ತುತ್ತಿಲ್ಲ. ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಬೀದಿಗೆ ಬಿದ್ದಿದ್ದ ಸಂತ್ರಸ್ತರು ಇನ್ನೂ ಬೀದಿಯಲ್ಲಿದ್ದಾರೆ. ಅವರ ಗೋಳಿಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ, ಅದರ ಮಂತ್ರಿಗಳು ಚಕಾರ ಎತ್ತುತ್ತಿಲ್ಲ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಎಂ.ಬಿ. ಪಾಟೀಲ ಭರವಸೆ ನೀಡಿದರು.
ಈ ಭಾಗದಲ್ಲಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು ಜನರು ತಕರಾರು ಸಹಕಾರ ನೀಡಬೇಕು ಎಂದರು. ಬೋಳಚಿಕ್ಕಲಕಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಲು ಮುಂದಾದ ಶಾಸಕ ಎಂ.ಬಿ. ಪಾಟೀಲ ಅವರನ್ನು ಗ್ರಾಮಸ್ತ ಗುರುಲಿಂಗಪ್ಪ ಅಂಗಡಿ ಸನ್ಮಾನಿದರು.
ಜಿಪಂ ಸದಸ್ಯೆ ದಾನಮ್ಮ ಅಂಗಡಿ, ಜಿಪಂ ಮಾಜಿ ಸದಸ್ಯ ಬಾಪುಗೌಡ ಪಾಟೀಲ ಶೇಗುಣಶಿ, ಬಬಲೇಶ್ವರ ತಾಪಂ ಅಧ್ಯಕ್ಷ ಸಂಗಪ್ಪ ತಿಮಶೆಟ್ಟಿ, ತಾಪಂ ಇಒ ಬಸವರಾಜ ಬಿರಾದಾರ, ಗುತ್ತಿಗೆದಾರ ಬಿ.ಆರ್. ನಂದಗೋಳ, ಅಭಿಯಂತರ ಎಂ.ಎ. ಪಾಟೀಲ, ಪಿಡಿಒ ರೇಖಾ ಪಾಟೀಲ, ಅಪ್ಪುಗೌಡ ಪಾಟೀಲ ಶೇಗುಣಶಿ, ಪ್ರಕಾಶ ಸೊನ್ನದ, ಸಂದೀಪ ಬಗಲಿ, ಅಶೋಕ ಕಾಖಂಡಕಿ, ಬಾಬುಗೌಡ ಪಾಟೀಲ, ಸಂಗಮೇಶ ಸಾಹುಕಾರ ಗುಣದಾಳ, ಸಂತೋಷ ಕುಲಕರ್ಣಿ, ಮುತ್ತಪ್ಪ ವಾಣಿ, ರಾಚಪ್ಪ ಅಂಗಡಿ, ಸಿದ್ದಪ್ಪ ಸಜ್ಜನ, ಡಾ| ಭರತ ಲೋನಾರಿ, ಮಲ್ಲಿಕಾರ್ಜುನ ಅಂಗಡಿ, ಸದಾಶಿವ ಸಜ್ಜನ, ಸೈಯದ್ ಅತ್ತಾರ, ಶೇಖು ಬಿರಾದಾರ ಇದ್ದರು.
ಕೋವಿಡ್ ಸಂಕಷ್ಟದಿಂದ ಜಗತ್ತೇ ತತ್ತರಿಸಿದ್ದು, ಎಷ್ಟೇ ನಿಯಮಗಳನ್ನು ಎಷ್ಟೇ ಕಟ್ಟುನಿಟ್ಟಾಗಿ ಪಾಲಿಸಿದರೂ ಕೋವಿಡ್ ನಿಯಂತ್ರ ಸಾಧ್ಯವಾಗಿಲ್ಲ. ರಾಜ್ಯಸಭಾ ನೂತನ ಸದಸ್ಯ ಅಶೋಕ ಗಸ್ತಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರವಿಗೌಡ ಪಾಟೀಲ ಧೂಳಖೇಡ ಹೀಗೆ ಹಲವು ಪ್ರಮುಖರು ಕೂಡ ಕೋವಿಡ್ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಹೀಗಾಗಿ ಜನರು ಮಾರಕ ರೀತಿಯ ಪ್ರಭಾವ ಹೊಂದಿರುವ ಈ ರೋಗದ ಕುರಿತು ಜನರು ಜಾಗೃತೆ ವಹಿಸಬೇಕು.
-ಎಂ.ಬಿ. ಪಾಟೀಲ, ಮಾಜಿ ಸಚಿವರು ಶಾಸಕರು, ಬಬಲೇಶ್ವರ