Advertisement

ಕೇಂದ್ರ ಬಜೆಟ್‌: ತಜ್ಞರ ಅಭಿಪ್ರಾಯ

08:25 PM Feb 01, 2022 | Team Udayavani |

ದೇಶದ ಆರ್ಥಿಕತೆಗೆ “ಬೂಸ್ಟರ್‌’ ಡೋಸ್‌ ಕೋವಿಡ್‌ ನಂತರ ಕೈಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿ ಮೂಲಕ “ಆರ್ಥಿಕ ಬೂಸ್ಟರ್‌’ ನೀಡುವ ಪ್ರಯತ್ನ ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕಾಣಬಹುದು. 400 ಹೊಸ ರೈಲುಗಳ ಕೊಡುಗೆ, ಒಳನಾಡು ಸಾರಿಗೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹಣದ ಹೊಳೆ ಹರಿದಿದೆ. ಇದರ ಫ‌ಲ ತಕ್ಷಣಕ್ಕೆ ಕಾಣದಿರಬಹುದು. ಆದರೆ, ಭವಿಷ್ಯದಲ್ಲಿ ಪರೋಕ್ಷವಾಗಿ ಕೈಗಾರಿಕೆಗಳ ಬೆಳವಣಿಗೆಗೆ ದೊಡ್ಡ ಪಾತ್ರ ನಿರ್ವಹಿಸಲಿದೆ.

Advertisement

ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಿ, ಟೋಲ್‌ ಮೂಲಕ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೂಂದೆಡೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲೂ ಮೂಲಸೌಕರ್ಯಗಳ ವೃದ್ಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಹೆಚ್ಚು ಸರಕು-ಸಾಗಣೆ ಸಾಧ್ಯವಾಗಲಿದೆ. ಪರಿಣಾಮ ಕೈಗಾರಿಕಾ ವಲಯಕ್ಕೆ ಉತ್ತೇಜನ ಸಿಗಲಿದೆ.

ಅದೇ ರೀತಿ, ರೈಲುಗಳನ್ನು ಪರಿಚಯಿಸಲಾಗಿದ್ದು, ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಬರೀ ರೈಲುಗಳನ್ನು ಹೆಚ್ಚಿಸಿದರೆ ಪ್ರಯೋಜನ ಇಲ್ಲ. ವಿದ್ಯುದೀಕರಣ, ಅಟೋಮ್ಯಾಟಿಕ್‌ ಸಿಗ್ನಲಿಂಗ್‌ ಸೇರಿದಂತೆ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವ ಕೆಲಸವೂ ಆಗಬೇಕು. ಆಗ, ಎರಡು ದಿನಗಳಿಗೆ ತಲುಪುವ ಸರಕು ಒಂದು ದಿನದಲ್ಲಿ ತಲುಪುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿತ್ತು. ಇನ್ನು ನದಿಗಳ ಜೋಡಣೆಗೆ ಮುಂದಾಗಿರುವುದು ಕೂಡ ಉತ್ತಮ ಬೆಳವಣಿಗೆ. ಇದರಲ್ಲಿ ಕಾವೇರಿ ಕೂಡ ಸೇರ್ಪಡೆ ಮಾಡಲಾಗಿದೆ. ಇದರಡಿ ಸುರಕ್ಷಿತ ಜಾಗಗಳಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಲ ಸಾರಿಗೆ ಸೌಲಭ್ಯ ಕಲ್ಪಿಸಬಹುದಾಗಿದೆ. ಎತ್ತರಿಸಿದ ಸೇತುವೆಗಳ ನಿರ್ಮಾಣ ಮೂಲಕ ರಸ್ತೆ ಸಾರಿಗೆಗಳನ್ನೂ ಭವಿಷ್ಯದಲ್ಲಿ ಕಲ್ಪಿಸಬಹುದು.

ಇದಲ್ಲದೆ, ಕೋವಿಡ್‌ ಹಾವಳಿ ನಂತರ ಆರೋಗ್ಯ ಕ್ಷೇತ್ರ ಕೂಡ ಮೂಲಸೌಕರ್ಯ ವಲಯಕ್ಕೆ ಬರುತ್ತಿದೆ. ಇಲ್ಲಿಯೂ ಹಲವಾರು ಕೊಡುಗೆಗಳನ್ನು ನೀಡಲಾಗಿದೆ. ಆದರೆ, ರಾಜ್ಯಕ್ಕೆ ನಿರ್ದಿಷ್ಟವಾಗಿ ಮೂಲಸೌಕರ್ಯಗಳಲ್ಲಿ ಕೊಡುಗೆ ನೀಡದಿರುವುದು ನಿರಾಸೆ ಮೂಡಿಸಿದೆ.
– ಪ್ರೊ.ಎಂ.ಎನ್‌. ಶ್ರೀಹರಿ, ಮೂಲಸೌಕರ್ಯ ತಜ್ಞ ಮತ್ತು ಸಲಹೆಗಾರರು

Advertisement

Udayavani is now on Telegram. Click here to join our channel and stay updated with the latest news.

Next