ಹೊಸದಿಲ್ಲಿ: ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿಸಲು ಉದ್ದೇಶಿಸಿರುವ ಕಾರಣ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ “ಕೇಂದ್ರ ಬಜೆಟ್ ಮೊಬೈಲ್ ಆ್ಯಪ್’ ಅನ್ನು ಅನಾವರಣ ಮಾಡಿದ್ದಾರೆ. ಸಂಸದರು ಹಾಗೂ ಸಾರ್ವಜನಿಕರು ಬಜೆಟ್ ಪ್ರತಿಗಳನ್ನು ಸುಲಭವಾಗಿ ಪಡೆದುಕೊಳ್ಳಲು ಈ ಆ್ಯಪ್ ನೆರವಾಗಲಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಇದೇ ವೇಳೆ ಪ್ರತೀ ವರ್ಷ ಬಜೆಟ್‌ಗೆ ಮುನ್ನ ನಡೆಯುವ ಸಾಂಪ್ರದಾಯಿಕ ಹಲ್ವಾ ಕಾರ್ಯಕ್ರಮಕ್ಕೂ ಸಚಿವೆ ನಿರ್ಮಲಾ ಶನಿವಾರ ಚಾಲನೆ ನೀಡಿದ್ದಾರೆ. ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಏನಿದು ಮೊಬೈಲ್ ಆ್ಯಪ್? :
ಈ ಆ್ಯಪ್‌ನಲ್ಲಿ ಕೇಂದ್ರ ಬಜೆಟ್‌ನ 14 ದಾಖಲೆಗಳು (ಆಯವ್ಯಯ, ಅನುದಾನದ ಬೇಡಿಕೆ, ಹಣಕಾಸು ಮಸೂದೆ ಇತ್ಯಾದಿ) ಲಭ್ಯವಿರಲಿದೆ.
ಆ್ಯಪ್ ಬಳಕೆದಾರ ಸ್ನೇಹಿಯಾಗಿದ್ದು, ಇದರ ಮೂಲಕ ಯಾವುದೇ ದಾಖಲೆಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು, ಮುದ್ರಿಸಬಹುದು, ಹುಡುಕಾಟ ನಡೆಸಬಹುದು, ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಬಹುದು.
ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಆ್ಯಪ್ ಲಭ್ಯವಿರಲಿದ್ದು, ಆಂಡ್ರಾಯ್ಡ ಮತ್ತು ಐಒಎಸ್ ಪ್ಲಾಟ್‌ಫಾರಂಗಳಲ್ಲೂ ದೊರೆಯಲಿದೆ.
ಈ ಆ್ಯಪ್ ಅನ್ನು ಕೇಂದ್ರ ಬಜೆಟ್‌ನ ವೆಬ್ ಪೋರ್ಟಲ್ (//indiabudget.gov.in) ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆರ್ಥಿಕ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದ ಮೇರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ಈ ಆ್ಯಪ್ ಅಭಿವೃದ್ಧಿಪಡಿಸಿದೆ.
ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡಿದ ಬಳಿಕವಷ್ಟೇ ಈ ಮೊಬೈಲ್ ಆ್ಯಪ್‌ನಲ್ಲಿ ಬಜೆಟ್ ದಾಖಲೆಗಳು ಸಿಗಲಿವೆ.