ರಾಮನಗರ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ ಬಜೆಟ್-2021 ಜಿಲ್ಲೆಯ ಜನರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಆದರೆ, ರೇಷ್ಮೆ ಆಮದು ಶುಲ್ಕವನ್ನು ಶೇ.10 ರಿಂದ 15ಕ್ಕೆ ಏರಿಸಿರುವುದನ್ನು ರೇಷ್ಮೆ ಕೃಷಿಕರು ಮತ್ತು ರೀಲರ್‌ಗಳು ಸ್ವಾಗತಿಸಿದ್ದಾರೆ. ಉಳಿದಂತೆ ಮೇಕೆ ದಾಟು ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿ ಅನುದಾನವನ್ನು ಮೀಸಲಿಡುವ ಭರವಸೆ ಹುಸಿಯಾಗಿದೆ.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಹೆಚ್ಚೇನು ನಿರೀಕ್ಷೆಗಳನ್ನು ಸಾಮಾನ್ಯವಾಗಿ ಇಟ್ಟು ಕೊಳ್ಳುವುದಿಲ್ಲ. ಆದರೆ, ಕೋವಿಡ್-19 ಹಿನ್ನೆಲೆ ನಲುಗಿರವ ಆರ್ಥಿಕತೆಯ ಜಿಗಿತಕ್ಕೆ ಪೂರಕ ಬಜೆಟ್‌ನ್ನು ಜಿಲ್ಲೆಯ ಜನತೆ ನಿರೀಕ್ಷಿಸಿದ್ದರು. ಮಾವು, ಆಹಾರ ಸಂಸ್ಕರಣ ಕ್ಷೇತ್ರಗಳ ವಿಚಾರದಲ್ಲಿ ರಾಮನಗರದಲ್ಲಿ ವಿಶೇಷ ಯೋಜನೆ ಘೋಷಿಸಿ, ಜಿಲ್ಲೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ದಾರಿ ಮಾಡುಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆಯಾದರು, ಜಿಲ್ಲೆಗೇನೂ ಸಿಕ್ಕಿಲ್ಲ ಎಂಬ ಕೊರಗು ಜಿಲ್ಲೆಯ ಜನರಲ್ಲಿ ಮನೆ ಮಾಡಿದೆ.
ರೈತರ ಆದಾಯ ದ್ವಿಗುಣ: ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಆಯವ್ಯಯದಲ್ಲಿ ವಿತ್ತ ಸಚಿವರು ಪುನರುಚ್ಚರಿಸಿದ್ದಾರೆ. ಆದರೆ, ಇದಕ್ಕೆ ಪೂರಕವಾದ ಅಂಶಗಳು ಬಜೆಟ್‌ನಲ್ಲಿ ಇಲ್ಲ. ಕಳೆದ ವರ್ಷದ ಬಜೆಟ್‌ನಲ್ಲೂ ಪೂರಕ ಅಂಶಗಳು ಇರಲಿಲ್ಲ. ಕಳೆದ ಬಜೆಟ್‌ನಲ್ಲಿ ಕಿಸಾನ್ ರೈಲಿನ ಬಗ್ಗೆ ವಿತ್ತ ಸಚಿವರು ಹೇಳಿದ್ದರು.
ಕಿಸಾನ್ ರೈಲು ಯಾವ ನಿಲ್ದಾಣದಲ್ಲಿ ನಿಂತಿದೆ. ಸ್ವಾಮಿನಾಥನ್ ವರದಿ ಜಾರಿ ಮಾಡದಿರುವ ಬಗ್ಗೆ ಜಿಲ್ಲೆಯ ರೈತ ಸಮುದಾಯ ಅಸಮಾಧಾನಗೊಂಡಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿ 30 ಸಾವಿರ ಕೋಟಿ ರೂ. ನೀಡಲಾಗಿತ್ತು. ಈ ಬಾರಿ 40 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಆದರೆ, ಯಾವ ಗ್ರಾಮೀಣ ಪ್ರದೇಶ ಉದ್ದಾರವಾಗಿದೆ. ಟೊಮೇಟೋ, ಈರುಳ್ಳಿ, ಆಲೂಗಡ್ಡೆಯ ಜೊತೆಗೆ ಬೇಗ ಕೊಳೆಯುವ 22 ಆಹಾರ ಪದಾರ್ಥಗಳನ್ನು ಆಪರೇಷನ್ ಗ್ರೀನ್ ಸ್ಕೀಂನಡಿ ತರುಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಇದನ್ನೂ ಓದಿ:ಆಕಸ್ಮಿಕ ಬೆಂಕಿಗೆ ಬಣವೆ,ತೊಗರಿ ಬೆಳೆ ನಾಶ; ಭೇಟಿ
ರೈತರ ಮನವೊಲಿಕೆ ಯತ್ನ: ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಮೂಲ ಸೌಕರ್ಯ ವೃದ್ಧಿಗೆ 40 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಇ-ನಾಮ್ ಸೇರಿದಂತೆ ಮೂಲ ಸೌಕರ್ಯ ವೃದ್ಧಿಗೆ ಈ ಹಣವನ್ನು ಉಪಯೋಗಿಸಿಕೊಳ್ಳುವುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸುತ್ತಿರುವ ರೈತರ ಮನವೊಲಿಕೆಗೆ ನಡೆದಿರುವ ಪ್ರಯತ್ನ ಇದು ಎಂಬುದು ರೈತರ ಆರೋಪವಾಗಿದೆ.
ಸೂರ್ಯಪ್ರಕಾಶ್