Advertisement

ಇವು ಸದ್ದು ಮಾಡಿದ ಬಜೆಟ್‌ಗಳು…

03:59 PM Feb 01, 2022 | Team Udayavani |

ಮಂಗಳವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಕೆಲವು ಪ್ರಮುಖ ಹಾಗೂ ಐತಿಹಾಸಿಕ ಎನ್ನಬಹುದಾದ ಬಜೆಟ್‌ಗಳ ಒಂದು ನೋಟವನ್ನು ಇಲ್ಲಿ ನೀಡಲಾಗಿದೆ.

Advertisement

ಶತಮಾನದ ಬಜೆಟ್‌
ಕಳೆದ ವರ್ಷ ಅಂದರೆ 2021ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಮುಂಗಡ ಪತ್ರವನ್ನು ಅವರೇ “ಶತಮಾನದ ಬಜೆಟ್‌’ ಎಂದು ಬಣ್ಣಿಸಿದ್ದರು. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಗುರಿ ಯೊಂದಿಗೆ ಈ ಬಜೆಟ್‌ ಮಂಡಿಸಲಾಗಿತ್ತು. ಅತಿ ಯಾದ ಖಾಸಗೀಕರಣ, ಭರ್ಜರಿ ತೆರಿಗೆ ಸಂಗ್ರಹ, ಮೂಲಸೌಕರ್ಯ ಮತ್ತು ಆರೋಗ್ಯಕ್ಷೇತ್ರಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲಾಗಿತ್ತು.

ಮಿಲೇನಿಯಂ ಬಜೆಟ್‌
ಯಶ್ವಂತ್‌ ಸಿನ್ಹಾ ಅವರು 2000ದಲ್ಲಿ ಮಂಡಿಸಿದ ಬಜೆಟ್‌ ಅನ್ನು ಮಿಲೇನಿಯಂ ಬಜೆಟ್‌ ಎನ್ನಲಾಗುತ್ತದೆ. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಮಾರ್ಗಸೂಚಿ ದೊರಕಿಸಿಕೊಟ್ಟ ಬಜೆಟ್‌ ಇದು. ಸಾಫ್ಟ್ವೇರ್‌ ರಫ್ತಿಗೆ ನೀಡ ಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಈ ಬಜೆಟ್‌ನಲ್ಲಿ ತಡೆಹಿಡಿಯ ಲಾಯಿತು. ಕಂಪ್ಯೂಟರ್‌ ಮತ್ತು ಅದರ ಪರಿಕರಗಳ ಕಸ್ಟಮ್ಸ್‌ ಸುಂಕವನ್ನೂ ಇಳಿಸಲಾಗಿತ್ತು.

ಡ್ರೀಮ್‌ ಬಜೆಟ್‌
ತೆರಿಗೆ ದರವನ್ನು ಇಳಿಸುವ ಮೂಲಕ ತೆರಿಗೆ ಸಂಗ್ರಹವನ್ನು ಹೆಚ್ಚಿಸುವಂಥ “ಲ್ಯಾಫ‌ರ್‌ ಕರ್ವ್‌ ಸಿದ್ಧಾಂತ’ವನ್ನು ಅನುಸರಿಸಿ ಪಿ.ಚಿದಂಬರಂ ಮಂಡಿಸಿದ ಬಜೆಟ್‌. 1997-98ರಲ್ಲಿ ಮಂಡನೆಯಾದ ಈ ಮುಂಗಡ ಪತ್ರವು “ಪ್ರತಿಯೊಬ್ಬರ ಕನಸಿನ ಬಜೆಟ್‌’ ಎಂಬ ಖ್ಯಾತಿ ಪಡೆಯಿತು. ಕಾರ್ಪೋರೆಟ್‌ ತೆರಿಗೆ ದರ ಇಳಿಕೆ, ವೈಯಕ್ತಿಕ ಆದಾಯ ತೆರಿಗೆ ದರ ಶೇ.40ರಿಂದ ಶೇ.30ಕ್ಕಿಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಉತ್ತೇಜನ ಮತ್ತಿತರ ಜನಪ್ರಿಯ ಕ್ರಮಗಳನ್ನು ಚಿದಂಬರಂ ಘೋಷಿಸಿದ್ದರು.

ಯುಗದ ಬಜೆಟ್‌
ಡಾ| ಮನಮೋಹನ್‌ ಸಿಂಗ್‌ ಅವರು 1991ರಲ್ಲಿ ಮಂಡಿಸಿದ ಐತಿಹಾಸಿಕ ಬಜೆಟ್‌, ಲೈಸೆನ್ಸ್‌ರಾಜ್‌ಗೆ ಅಂತ್ಯಹಾಡಿ, ಆರ್ಥಿಕ ಉದಾರವಾದದ ಯುಗ ವನ್ನು ಆರಂಭಿಸಿತು. ಭಾರತವು ಆರ್ಥಿಕ ಪತನದ ಅಂಚಿಗೆ ಬಂದು ತಲುಪಿದ್ದ ಆ ಹೊತ್ತಲ್ಲಿ, ಸಿಂಗ್‌ ಮಂಡಿಸಿದ ಬಜೆಟ್‌ ದೇಶವನ್ನು ರಕ್ಷಿಸಿತು. ರಫ್ತು ಉತ್ತೇಜನಕ್ಕೆ ಅಗತ್ಯ ಕ್ರಮ, ಕಸ್ಟಮ್ಸ್‌ ಸುಂಕವನ್ನು ಶೇ.220ರಿಂದ ಶೇ.150ಕ್ಕಿಳಿಕೆ ಮತ್ತಿತರ ಪ್ರಮುಖ ಕ್ರಮಗಳನ್ನು ಘೋಷಿಸಲಾಯಿತು.

Advertisement

ಉಡುಗೊರೆ ಮತ್ತು ದಂಡ ಬಜೆಟ್‌
1991ರಲ್ಲಿ ಪಿವಿ ನರಸಿಂಹರಾವ್‌ ಸರಕಾರ ಲೈಸೆನ್ಸ್‌ ರಾಜ್‌ಗೆ ಕೊನೆಹಾಡಿತು. ಆದರೆ ಈ ವ್ಯವಸ್ಥೆಯನ್ನು ನಾಶಮಾಡುವ ಆರಂಭಿಕ ಕ್ರಮಗಳನ್ನು 1986ರಲ್ಲಿ ವಿ.ಪಿ.ಸಿಂಗ್‌ ಆಯವ್ಯಯ ದಲ್ಲೇ ಕೈಗೊಳ್ಳಲಾಗಿತ್ತು. ಫೆ.28ರಂದು ವಿ.ಪಿ.ಸಿಂಗ್‌ ಮಂಡಿಸಿದ ಮುಂಗಡಪತ್ರವನ್ನು “ಉಡುಗೊರೆ ಮತ್ತು ದಂಡ’ (ಕ್ಯಾರೆಟ್‌ ಆ್ಯಂಡ್‌ ಸ್ಟಿಕ್‌) ಬಜೆಟ್‌ ಎನ್ನುತ್ತಾರೆ. ಇದರಲ್ಲಿ ಪರಿಷ್ಕೃತ ಮೌಲ್ಯವರ್ಧಿತ ತೆರಿಗೆ ಯನ್ನು ಪರಿಚಯಿಸುವುದರ ಜತೆಗೆ ಕಳ್ಳಸಾಗಣೆದಾರರು, ಕಾಳ ಸಂತೆಕೋರರು, ತೆರಿಗೆ ತಪ್ಪಿಸುವವರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಯಿತು.

ಕರಾಳ ಬಜೆಟ್‌
1973 -74ರಲ್ಲಿ ಇಂದಿರಾಗಾಂಧಿ ಸರಕಾರವಿದ್ದಾಗ ಯಶವಂತರಾವ್‌ ಬಿ. ಚವಾಣ್‌ ಮಂಡಿಸಿದ ಮುಂಗಡಪತ್ರವು “ಕರಾಳ ಬಜೆಟ್‌'(ಬ್ಲ್ಯಾಕ್‌ ಬಜೆಟ್‌) ಎಂದೇ ಕರೆಯಲ್ಪಟ್ಟಿದೆ. ಏಕೆಂದರೆ ಆ ವರ್ಷ ದೇಶದ ವಿತ್ತೀಯ ಕೊರತೆಯು 550 ಕೋಟಿ ರೂ.ಗಳಾಗಿದ್ದವು. ಆ ಸಮಯದಲ್ಲೇ ದೇಶವು ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಹಂತಕ್ಕೆ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next