ನವದೆಹಲಿ: ದೇಶದಲ್ಲಿ ಆರ್ಥಿಕ ಹಿನ್ನಡೆ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯ-ವ್ಯಯ ಮಂಡನೆಗೆ ಸಿದ್ಧರಾಗಿದ್ದಾರೆ. ಮಾರುಕಟ್ಟೆ ಚೇತರಿಕೆ, ಉದ್ಯಮ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಕ್ರಮಗಳನ್ನು ತಮ್ಮ ಆಯ-ವ್ಯಯದಲ್ಲಿ ಪ್ರಟಿಸಬೇಕಾಗಿರುವ ಅನಿವಾರ್ಯತೆಯಲ್ಲಿರುವ ನಿರ್ಮಾಲಾ ಅವರು ಮಧ್ಯಮವರ್ಗದ ತೆರಿಗೆದಾರರಿಗೆ ಸಿಹಿಸುದ್ದಿ ನೀಡುವ ನಿರೀಕ್ಷೆಯೂ ಇದೀಗ ಹುಟ್ಟಿಕೊಂಡಿದೆ.
5ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸುವ ಪ್ರಸ್ತಾವನೆ ಈ ಬಾರಿಯ ಬಜೆಟ್ ನಲ್ಲಿ ಇದೆ ಎಂದು ತಿಳಿದುಬಂದಿದೆ.
ಹಾಗೆಯೇ 5,00,001 ರಿಂದ 10 ಲಕ್ಷದವರಗಿನ ಆದಾಯಕ್ಕೆ 10%, 10,00,001 ರಿಂದ 20 ಲಕ್ಷದವರೆಗಿನ ಆದಾಯಕ್ಕೆ 20% ಹಾಗೂ 20 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ 30% ತೆರಿಗೆ ಮಿತಿಯನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.
ಕಳೆದ ಕೇಂದ್ರ ಬಜೆಟ್ ನಲ್ಲಿ 2.5 ಲಕ್ಷದವರೆಗಿನ ವ್ಯಕ್ತಿ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಇನ್ನು 2,50,001 ರಿಂದ 5,00,000ದವರೆಗಿನ ಆದಾಯಕ್ಕೆ 5% ತೆರಿಗೆ ವಿಧಿಸಲಾಗಿತ್ತು. 5 ಲಕ್ಷಕ್ಕಿಂತ ಅಧಿಕ ಆದಾಯವನ್ನು ಹೊಂದಿರುವ ವ್ಯಕ್ತಿಯೊಬ್ಬ 5 ರಿಂದ 20 ಪ್ರತಿಶತ ತೆರಿಗೆ ಪಾವತಿಸುವುದರಿಂದ ಆ ವ್ಯಕ್ತಿಯ ಕೈಗೆ ಸಿಗುವ ಆದಾಯದ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿತ್ತು.
ಇದೀಗ ಆದಾಯ ತೆರಿಗೆಯನ್ನು ಇಳಿಕೆ ಮಾಡುವುದರಿಂದ ಜನರ ಕೈಯಲ್ಲಿ ಹಣದ ಓಡಾಟ ಹೆಚ್ಚಾಗಿ ಆರ್ಥಿಕತೆಯಲ್ಲಿ ಹಣದ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ ಮತ್ತಿದು ವ್ಯಕ್ತಿಗತ ಹಣದ ವ್ಯಯಿಸುವಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂಬುದು ಸರಕಾರದ ಯೋಚನೆಯಾಗಿದೆ.