Advertisement

ನಾಳೆ ಕೇಂದ್ರ ಬಜೆಟ್‌ : ನಿರ್ಮಲಾರತ್ತ ಅಪಾರ ನಿರೀಕ್ಷೆ

08:32 AM Feb 01, 2021 | sudhir |

ಬೆಂಗಳೂರು : ರಾಜ್ಯದ ಪಾಲಿಗೆ 2020 ಕಠಿನವಾದ ವರ್ಷ. ಅತ್ತ ಕೊರೊನಾ ಆರ್ಭಟ, ಇತ್ತ ಪ್ರವಾಹದ ಸಂಕಟ… ಇದರ ನಡುವೆ ಸರಕಾರವು ಆರ್ಥಿಕತೆಯನ್ನು ಹೇಗೋ ಸರಿದೂಗಿಸಿಕೊಂಡು ಆಡಳಿತ ನಡೆಸುತ್ತಿದೆ. ಸೋಮವಾರ ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ರಾಜ್ಯವು ಅಪಾರ ನಿರೀಕ್ಷೆ ಇರಿಸಿಕೊಂಡಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದಿಂದ ತೆರಿಗೆ ಪಾಲು ಮತ್ತು ಅನುದಾನ ರೂಪದಲ್ಲಿ 34,045 ಕೋಟಿ ರೂ. ನಿರೀಕ್ಷಿಸಲಾಗಿದೆ. ಕೋವಿಡ್‌ನಿಂದ ಖೋತಾ ಆದ ವಾಣಿಜ್ಯ ತೆರಿಗೆ ಆದಾ ಯವನ್ನು ಸರಿದೂಗಿಸಿಕೊಳ್ಳಲು ಜಿಎಸ್‌ಟಿ ಪರಿಹಾರವನ್ನೂ  ನೀಡಬೇಕೆಂದು ಆಗ್ರಹಪೂರ್ವಕ ಮನವಿಯನ್ನೂ ರಾಜ್ಯ ಸರಕಾರ ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲೂ ಹೆಚ್ಚುವರಿ ಸಾಲ ಎತ್ತುವಳಿಗೆ ಕೇಂದ್ರ ದಿಂದ ಹಸುರು ನಿಶಾನೆ ಪಡೆಯುವ ನಿರೀಕ್ಷೆ ರಾಜ್ಯದ್ದಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 2.37 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆಯಾಗಿದ್ದರೂ ಕೋವಿಡ್‌ ವೈರಾಣು ಹಾವಳಿ ಆರ್ಥಿಕತೆಗೆ ಭಾರೀ ಪೆಟ್ಟು ಕೊಟ್ಟಿದೆ. ಕೇಂದ್ರದಿಂದ ಪಡೆಯುವ ತೆರಿಗೆ ಆದಾಯ, ಜಿಎಸ್‌ಟಿ ಪರಿಹಾರದಲ್ಲೂ ಏರುಪೇರಾಗಿದೆ. ಇದರಿಂದ 2020-21ನೇ ಸಾಲಿನ ಬಜೆಟ್‌ ಗಾತ್ರದಲ್ಲಿ 25,000 ಕೋಟಿ ರೂ. ಇಳಿಕೆಯಾಗಲಿದೆ ಎಂದು ಈಗಾಗಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ನಿರ್ಮಲಾ ಅವರತ್ತ ದೃಷ್ಟಿ
ಕೇಂದ್ರ ಬಜೆಟ್‌ಗೆ ಪೂರ್ವಭಾವಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ನಡೆದ ವೀಡಿಯೋ ಸಂವಾದ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ಪ್ರಮುಖ ಬೇಡಿಕೆಗಳ ಬಗ್ಗೆ ಪ್ರಸ್ತಾವಿಸಿದ್ದರು.
ಪ್ರಮುಖವಾಗಿ 15ನೇ ಹಣಕಾಸು ಆಯೋಗವು 2020-21ನೇ ಸಾಲಿಗೆ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿದ್ದು, ಅದನ್ನು 2021-22ನೇ ಸಾಲಿನ ಆಯವ್ಯಯದಲ್ಲಿ ನೀಡಬೇಕು ಎಂದು ಕೋರಲಾಗಿದೆ.
ಕೇಂದ್ರ ಪ್ರಾಯೋಜಿತ ಯೋಜನೆ ಗಳು ಪುನರಾವರ್ತನೆಯಾಗದಿರಲು ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬಜೆಟ್‌ನಲ್ಲಿ ಘೋಷಿಸಿದಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು. ಈ ಅನುದಾನದಲ್ಲಿ ಕಡಿತವಾದರೆ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ.

ಅನುದಾನ ಕಡಿತ?
ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದ ತೆರಿಗೆ ಆದಾಯದಲ್ಲಿ ರಾಜ್ಯಕ್ಕೆ ನೀಡುವ ಪಾಲು, ಕೇಂದ್ರದ ಅನುದಾನದಲ್ಲಿ ಶೇ. 20ರಷ್ಟು ಕಡಿತವಾಗುವ ಆತಂಕ ಮೂಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ತೆರಿಗೆ ಆದಾಯವೂ ಕಡಿಮೆಯಾಗಿದೆ. ಪರಿಣಾಮವಾಗಿ ಈ ಹಿಂದೆ ಬಜೆಟ್‌ನಲ್ಲಿ ಕೇಂದ್ರವು ಘೋಷಿಸಿದಷ್ಟು ನೀಡುವುದು ಕಷ್ಟ ಎಂಬ ಅಭಿಪ್ರಾಯ ಆರ್ಥಿಕ ಇಲಾಖೆ ಮೂಲಗಳದ್ದು.

Advertisement

ಬೇಡಿಕೆಗಳ ಪಟ್ಟಿ

ಬಂದರು ಅಭಿವೃದ್ಧಿ:
ಕರಾವಳಿ ಭಾಗದಲ್ಲಿ ಸಣ್ಣ , ದೊಡ್ಡ ಬಂದರುಗಳ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಬೆಂಬಲಿತ ವಿಶೇಷ ಉದ್ದೇಶ ವಾಹಕ ರಚನೆ ಸಂಬಂಧ ನೀತಿ ರೂಪಿಸಲು ಚಿಂತಿಸಬೇಕು. ಬಂದರುಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗೂ ಅವಕಾಶ ಕಲ್ಪಿಸುವ ಅಂಶವನ್ನು ಗಮನಿಸಬೇಕು. ಸುಮಾರು 360 ಕಿ.ಮೀ. ಉದ್ದದ ಕಡಲ ತೀರವಿದ್ದು, ಬಂದರುಗಳ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಸರಕಾರದ ಅನುದಾನದಲ್ಲೇ ಕೈಗೊಳ್ಳಬೇಕು.

ಪ್ರವಾಹ ಪರಿಹಾರ
ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ರಾಜ್ಯದಲ್ಲಿ ಕಾಡಿದ ಪ್ರವಾಹ ಭಾರೀ ನಷ್ಟಕ್ಕೆ ಕಾರಣವಾಗಿದೆ. ರಾಜ್ಯ ಸರಕಾರ 2,261 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿದೆ. ಮೊದಲ ಹಂತದಲ್ಲಿ ಕೇಂದ್ರ ಸರಕಾರ 1,369 ಕೋಟಿ ರೂ. ಬಿಡುಗಡೆ ಮಾಡಿದೆ. 2ನೇ ಹಂತದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.

ಎಂಎಸ್‌ಪಿ ಬಾಕಿ
ಸದ್ಯ ಕೇಂದ್ರ ಸರಕಾರದ ಬಳಿ ರಾಜ್ಯದ 885 ಕೋಟಿ ರೂ. ಕನಿಷ್ಠ ಬೆಂಬಲ ಬೆಲೆ ಬಾಕಿ ಹಣ ಉಳಿದಿದೆ. ರೈತರ ಅನುಕೂಲಕ್ಕಾಗಿ ಬಜೆಟ್ನಲ್ಲಿ ಈ ಹಣವನ್ನು ಬಿಡುಗಡೆ ಮಾಡಬೇಕು.

ರಾಷ್ಟ್ರೀಯ ಯೋಜನೆಗಳು
“ಕೃಷ್ಣಾ ಮೇಲ್ದಂಡೆ ಯೋಜನೆ-3′ ಮತ್ತು ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ನೆರವಿನ ಪ್ರಮಾಣವನ್ನು ಯೋಜನಾ ವೆಚ್ಚದ ಶೇ. 90ಕ್ಕೆ ವಿಸ್ತರಿಸಬೇಕು.

ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡಿ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಮುಂದಾಗಿದೆ. ಕೇಂದ್ರ ಹೆಚ್ಚುವರಿ ಅನುದಾನ ನೀಡಬೇಕು.

ರೈಲ್ವೇ ಅನುದಾನ
ಬೃಹತ್‌ ರೈಲ್ವೇ ಯೋಜನೆಗಳಿಗೆ ಕೇಂದ್ರದೊಂದಿಗೆ ವೆಚ್ಚ ಹಂಚಿಕೆಗೆ ಮುಂದಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನ ನೆರವು ಘೋಷಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next