ಒಂದು ಉತ್ಪನ್ನದ ಬೇಡಿಕೆ ಹೆಚ್ಚಾದಾಗ, ಪೂರೈಕೆಯ ಮೇಲೆ ಭಾರ ಬೀಳುವುದು, ದರ ಏರಿಕೆಯಾಗುವುದು ಸಹಜ. ಅದೇ ವೇಳೆಯಲ್ಲೇ ಉತ್ಪನ್ನದ ಲಭ್ಯತೆ ಹೆಚ್ಚಾಗಿ, ಬೇಡಿಕೆಯಲ್ಲಿ ಹೆಚ್ಚಳವಾಗದಿದ್ದರೆ ದರಗಳು ಕುಸಿಯುವುದು ಸಹಜ. ಆದರೆ ಈ ಸಂಗತಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ವಿಚಾರಕ್ಕೆ ಅನ್ವಯವಾದದ್ದು ಕಡಿಮೆಯೇ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ವಿಶ್ವಾದ್ಯಂತ ತರಲಾದ ಲಾಕ್‌ಡೌನ್‌ಗಳು ಹಾಗೂ ಸಂಚಾರ ನಿರ್ಬಂಧಗಳಿಂದಾಗಿ ಅಂತಾ ರಾಷ್ಟ್ರೀಯ ಸ್ತರದಲ್ಲಿ ಕಚ್ಚಾ ತೈಲದ ದರದಲ್ಲಿ ಗಣನೀಯ ಇಳಿಕೆ ಯಾಗಿದ್ದರೂ ಭಾರತದಲ್ಲಿ ಇಂಧನ ದರ ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಸಾಗಿದೆ.
ರವಿವಾರ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91.70 ರೂಪಾಯಿ ತಲುಪಿದರೆ, ಇನ್ನೊಂದೆಡೆ ಡೀಸೆಲ್ ದರ 83.81 ರೂಪಾಯಿ ತಲುಪಿತ್ತು. ಮಹಾರಾಷ್ಟ್ರದ ಪರ್ಬನಿಯಲ್ಲಂತೂ ಪೆಟ್ರೋಲ್ ದರ 100 ರೂಪಾಯಿ ದಾಟಿದ್ದು ಸುದ್ದಿಯಾಯಿತು. ಕೋವಿಡ್ ಕಾರಣದಿಂದಾಗಿ ತತ್ತರಿಸಿರುವ ಭಾರತೀಯರಿಗೆ ನಿಸ್ಸಂಶಯ ವಾಗಿಯೂ ಪೆಟ್ರೋಲ್, ಡೀಸೆಲ್ ಮೇಲಿನ ದರ ಏರಿಕೆ ಬಹಳ ಒತ್ತಡ ಸೃಷ್ಟಿಸುತ್ತಿದೆ.
ಆರ್ಥಿಕತೆ ಸಹಜತೆಯತ್ತ ಮರಳಬೇಕೆಂದರೆ, ಬೇಡಿಕೆ ಹೆಚ್ಚಾಗಬೇಕು ಎನ್ನುತ್ತಾರೆ ವಿತ್ತ ಪರಿಣತರು. ಗ್ರಾಹಕರು ಹೆಚ್ಚು ವಸ್ತುಗಳನ್ನು ಕೊಳ್ಳುವಂತಾದರೆ, ವಿತ್ತೀಯ ಸ್ಥಿತಿ ಸುಧಾರಿಸುತ್ತದೆ ಎನ್ನುವ ದೃಷ್ಟಿಯಿಂದ ಕೇಂದ್ರ ಸರಕಾರವೂ ತನ್ನ ಬಜೆಟ್‌ನಲ್ಲಿ ಪೂರಕ ಕ್ರಮಗಳನ್ನು ಘೋಷಿಸಿದೆ. ಆದರೆ ಕೇಂದ್ರ ಬಜೆಟ್‌ನ ಆಶಯಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಅಡ್ಡಗಾಲಾಗಿ ಪರಿಣಮಿಸುತ್ತಿದೆ. ಇಂಧನ ಬೆಲೆ ಏರಿಕೆಯು ದೇಶದಲ್ಲಿ ಉಳಿದೆಲ್ಲ ಉತ್ಪನ್ನಗಳ ಮೇಲಿನ ಬೆಲೆಯೂ ಹೆಚ್ಚುವಂತೆ ಮಾಡುತ್ತಿದೆ. ದವಸ -ಧಾನ್ಯ, ತರಕಾರಿ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಗಳೂ ಇಂಧನದ ಬೆಲೆಯನ್ನು ಅವಲಂಬಿಸಿರುತ್ತವೆ. ಇಂಧನ ದರ ಹೆಚ್ಚಾ ದಂತೆಲ್ಲ ಸರಕು-ಸಾಗಣೆಯ ಖರ್ಚೂ ಹೆಚ್ಚಾಗುತ್ತದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವುದು ಸಹಜ. ಹೀಗಾದಾಗ, ಜನರು ವಸ್ತುಗಳ ಖರೀದಿಯ ವಿಚಾರದಲ್ಲಿ ಹಿಂದೆ ಮುಂದೆ ನೋಡುವ ಸಾಧ್ಯತೆ ಅಧಿಕವಾಗುತ್ತದೆ. ಹೀಗಾಗಿ ಬೇಡಿಕೆ ಹೆಚ್ಚಬೇಕೆಂಬ ಆಶಯಕ್ಕೇ ಪೆಟ್ಟು ಬೀಳುತ್ತದಲ್ಲವೇ? ಇದೊಂದೇ ವಲಯವೆಂದಷ್ಟೇ ಅಲ್ಲ, ತೈಲ ದರ ಏರಿಕೆಯಿಂದಾಗಿ ಹೊಟೇಲ್‌ಗಳು, ಆಟೋ ಚಾಲಕರು, ಓಲಾ ಉಬರ್‌ನಂಥ ಸಂಚಾರ ವಲಯಕ್ಕೂ ಕಷ್ಟವಾಗುತ್ತಿದೆ.
ಸಮಸ್ಯೆಯೇನೆಂದರೆ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರಗಳ ಮೇಲೆ 69 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರಲ್ಲಿ ರಸ್ತೆ ಮೂಲಸೌಕರ್ಯ ಸೆಸ್, ಕೃಷಿ ಮೂಲ ಸೌಕರ್ಯ ಸೆಸ್‌ನಂಥ ಅಭಿವೃದ್ಧಿ ಯೋಜನೆಗೆ ಪೂರಕವಾದ ಸೆಸ್ ಇವೆ. ಆದರೆ ಬೇರೆಲ್ಲೋ ಆಗಿರುವ ಕೊರತೆಯನ್ನು ಇಂಧನ ಬೆಲೆ ಏರಿಕೆಯ ಮೂಲಕ ತುಂಬಿಕೊಳ್ಳುವ ಪ್ರಯತ್ನ ಆಗಬಾರದು. ಈ ಕಾರಣಕ್ಕಾಗಿಯೇ, ಕರ್ನಾಟಕ ಸರಕಾರ ಮುಂಬರುವ ಬಜೆಟ್‌ನಲ್ಲಿ ಇಂಧನದ ಮೇಲಿನ ರಾಜ್ಯದ ಪಾಲಿನ ತೆರಿಗೆಯನ್ನು ಕಡಿತಗೊಳಿಸಿ ಜನರು ನಿರಾಳರಾಗುವಂತೆ ಮಾಡಲು ಮುಂದಾಗಬೇಕಿದೆ.