ಹೊಸದಿಲ್ಲಿ: ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಜಾತಿಗಳ ಪಾಲಿಗೆ ಕೇಂದ್ರ ಸರಕಾರ ಶುಭ ಸುದ್ದಿ ಕೊಟ್ಟಿದೆ. ಸಂವಿಧಾನದ 102ನೇ ತಿದ್ದುಪಡಿಯು ರಾಜ್ಯಗಳ ಮೀಸಲಾತಿ ಘೋಷಣೆ ಅಧಿಕಾರವನ್ನು ನಿರಾಕರಿಸಿಲ್ಲ ಎಂದು ಅದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ಅಂದರೆ ರಾಜ್ಯ ಸರಕಾರಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಘೋಷಿಸಬಹುದು ಎಂದು ಹೇಳಿದೆ.
ಬುಧವಾರ ಕರ್ನಾಟಕದ ಪರವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಮೀಸಲಾತಿ ಮಿತಿಯನ್ನು ತೆಗೆಯುವುದು ಸೂಕ್ತ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮರಾಠಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಪರವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಶೇ. 16ರಷ್ಟು ಮೀಸಲಾತಿ ನೀಡಿರುವ ಅಲ್ಲಿನ ರಾಜ್ಯ ಸರಕಾರದ ಕ್ರಮ ಸಾಂವಿಧಾನಿಕವಾದದ್ದು ಎಂದಿದ್ದಾರೆ. ಜತೆಗೆ ಈಗಾಗಲೇ ಅಟಾರ್ನಿ ಜನರಲ್ ಅವರು ಹೇಳಿರುವಂತೆ ಸಂವಿಧಾನದ 102ನೇ ತಿದ್ದು ಪಡಿಯು ರಾಜ್ಯಗಳ ಮೀಸಲು ಘೋಷಣೆ ಅಧಿಕಾರವನ್ನು ಕಿತ್ತುಕೊಂಡಿಲ್ಲ ಎಂದು ಹೇಳಿದ್ದಾರೆ.
ರಾಜ್ಯಗಳ ಒಕ್ಕೊರಲ ಆಗ್ರಹ
ಮರಾಠಾ ಮೀಸಲಾತಿ ಸಂಬಂಧ ಸದ್ಯ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ. ವಿಶೇಷವೆಂದರೆ ಮೀಸಲಾತಿ ಮಿತಿ ತೆಗೆಯುವ ವಿಚಾರದಲ್ಲಿ ಹೆಚ್ಚುಕಡಿಮೆ ಬಹುತೇಕ ರಾಜ್ಯಗಳು ಒಮ್ಮತ ವ್ಯಕ್ತಪಡಿಸಿವೆ.
ಮಂಗಳವಾರವಷ್ಟೇ ವಾದ ಮಂಡಿಸಿದ್ದ ಕೆಲವು ರಾಜ್ಯಗಳು ಮೀಸಲಾತಿ ಅಧಿಕಾರ ರಾಜ್ಯಗಳ ಪಾಲಿಗೇ ಇರಬೇಕು. ಜತೆಗೆ ಶೇ. 50ರ ಮಿತಿ ಇರಬಾರದು. ಇದಕ್ಕೆ ಸಂವಿಧಾನದ ಮನ್ನಣೆ ಇಲ್ಲ ಎಂದು ವಾದಿಸಿದ್ದವು.
ಶೇ. 50ರ ಮಿತಿ ಸಲ್ಲದು
ಕರ್ನಾಟದ ಪರವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಶೇ. 50ರ ಮಿತಿ ಸಲ್ಲದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪರಿಚ್ಛೇದ 371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ಮೀಸಲಾತಿಯನ್ನೂ ಗಮನಕ್ಕೆ ತಂದರು. ಶೇ. 50ರ ಮಿತಿ ಬೇಕೋ ಅಥವಾ ಬೇಡವೇ ಎಂಬುದನ್ನು ಪುನರ್‌ವಿಮರ್ಶೆ ಮಾಡಲು 371(ಜೆ) ಕೂಡ ಅತ್ಯಂತ ಪ್ರಮುಖವಾದದ್ದು ಎಂದರು.