Advertisement

ತೈಲ ಬೆಲೆ ಇಳಿಕೆಗೆ ಕೇಂದ್ರದ ನಿರ್ಧಾರ: ಮಿಥನಾಲ್‌ಗೆ ಸ್ವಾಗತ

08:01 AM Dec 11, 2017 | Team Udayavani |

ಪೆಟ್ರೋಲಿಗೆ ಹೋಲಿಸಿದರೆ ಮಿಥನಾಲ್‌ನಿಂದ ಹಲವು ರೀತಿಯ ಲಾಭಗಳಿವೆ ಎನ್ನುವುದು ನಿಜ. ಈ ಇಂಧನಕ್ಕಾಗಿ ವಿದೇಶಗಳನ್ನೇ  ನೆಚ್ಚಿಕೊಳ್ಳುವ  ಅಗತ್ಯವಿಲ್ಲ. ಸ್ಥಳೀಯವಾಗಿ ಉತ್ಪಾದಿಸಿಕೊಳ್ಳಬಹುದು. ಇದು ಕಲ್ಲಿದ್ದಲಿನ ಉಪ ಉತ್ಪನ್ನ. ಜತೆಗೆ ಇದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣವೂ ಕಡಿಮೆ.

Advertisement

ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಕಡಿಮೆಯಾಗಬೇಕೆನ್ನುವುದು ಪ್ರತಿಯೊಬ್ಬರ ಇಚ್ಛೆ. ಈ ಎರಡು ಇಂಧನಗಳು ವಾಹನ ಹೊಂದಿರುವವರ ಮಾತ್ರವಲ್ಲದೆ ಪ್ರತಿಯೊಬ್ಬರ ಬದುಕಿನ ಜತೆಗೆ ಮೇಲೆ ನೇರ ಸಂಬಂಧ ಹೊಂದಿವೆ. ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಕಡಿಮೆಯಾದ ಕೂಡಲೇ ಸಾಗಾಟ ವೆಚ್ಚ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸರಳ ಅರ್ಥಶಾಸ್ತ್ರ. ಹೀಗಾಗಿ ಎಲ್ಲರೂ ಅವುಗಳ ಬೆಲೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಆದರೆ ಜನರು ನಿರೀಕ್ಷಿಸಿದ ಮಟ್ಟಕ್ಕೆ ಈ ಇಂಧನಗಳ ಬೆಲೆ ಇಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಾಸ್ತವ. ಈಗಲೂ ದೇಶದಲ್ಲಿ ಪೆಟ್ರೋಲು 70 ರೂ. ಮತ್ತು ಡೀಸೆಲ್‌ 50 ರೂ. ಆಸುಪಾಸಿನಲ್ಲಿದೆ. ದುರದೃಷ್ಟವೆಂದರೆ ಪೆಟ್ರೋಲು ಮತ್ತು ಡೀಸೆಲ್‌ಗಾಗಿ ನಾವು ವಿದೇಶಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಗಲ್ಫ್ ದೇಶಗಳನ್ನು ಅವಲಂಬಿಸಿರಬೇಕಾಗುತ್ತದೆ. ವಿದೇಶದಿಂದ ತಂದ ಕಚ್ಚಾತೈಲವನ್ನು ಸಂಸ್ಕಾರಣಾಗಾರಕ್ಕೆ ಸಾಗಿಸಿ ಸಂಸ್ಕರಿಸಿ ಪೆಟ್ರೋಲು ಮತ್ತು ಡೀಸೆಲ್‌ ಆಗಿ ಪರಿವರ್ತಿಸಿ ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತದೆ. ಕಚ್ಛಾತೈಲ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ದೇಶ ಭಾರೀ ಮೊತ್ತದ ವಿದೇಶಿ ವಿನಿಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹೀಗೆ ನಷ್ಟವಾದ ವಿದೇಶಿ ವಿನಿಮಯವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಡೀಸೆಲ್‌ ಮತ್ತು ಪೆಟ್ರೋಲು ಮೇಲೆ ನಾನಾ ರೀತಿಯ ತೆರಿಗೆಯನ್ನು ಹಾಕುತ್ತದೆ. ಇದರಿಂದಾಗಿ ಈ ಇಂಧನಗಳ ಬೆಲೆಯಲ್ಲಿ ಶೇ. 50ರಷ್ಟು ತೆರಿಗೆ ಒಳಗೊಂಡಿರುತ್ತದೆ. ತೆರಿಗಳಿಂದಾಗಿ ಅವುಗಳು ಸದಾ ದುಬಾರಿಯಾಗಿಯೇ ಇರುತ್ತವೆ.ಆದರೆ ಕಾಲಕಾಲಕ್ಕೆ ಡೀಸೆಲ್‌ ಮತ್ತು ಪೆಟ್ರೋಲು ಬೆಲೆ ಇಳಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿರುತ್ತದೆ.

ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಇಳಿಸಲು ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ. ಅದು ಪೆಟ್ರೋಲಿಗೆ ಮಿಥನಾಲ್‌ ಎಂಬ ರಾಸಾಯನಿವನ್ನು ಬೆರೆಸುವುದು. ಈಗಾಗಲೇ  ಮಿಥನಾಲ್‌ ಮತ್ತು ಇಥನಾಲ್‌ ಎಂಬ ರಾಸಾಯನಿಕಗಳನ್ನು ಅಲ್ಪ ಪ್ರಮಾಣ ದಲ್ಲಿ ಬೆರೆಸಲಾಗುತ್ತಿದೆ. ಮಿಥನಾಲ್‌ ಲೀಟರಿಗೆ ಬರೀ 22 ರೂ.ಗೆ ಸಿಗುವುದರಿಂದ ಮಿಥನಾಲ್‌ ಪ್ರಮಾಣವನ್ನು ಶೇ. 15ಕ್ಕೇರಿಸುವ ಮೂಲಕ ಪೆಟ್ರೋಲು ಬೆಲೆ ಇಳಿಸಬಹುದು ಎನ್ನುವುದು ಅವರ ಲೆಕ್ಕಾಚಾರ. ಮುಂಬರುವ ಅಧಿವೇಶನದಲ್ಲಿ ಮಿಥನಾಲ್‌ ಬೆರೆಸುವುದನ್ನು ಕಡ್ಡಾಯಗೊಳಿಸುವ ಮಸೂದೆ ಮಂಡಿಸಿ ಮಂಜೂರು ಮಾಡಿಕೊಂಡು ಶಾಸನ ರೂಪದಲ್ಲಿ ಜಾರಿಗೆ ತರುವುದು ಅವರ ಉದ್ದೇಶ. ಮಿಥನಾಲ್‌ನಿಂದ ಹಲವು ರೀತಿಯ ಲಾಭಗಳಿವೆ. ಈ ಇಂಧನಕ್ಕಾಗಿ ವಿದೇಶಗಳನ್ನೇ ಅವಲಂಬಿಸಿಕೊಂಡಿರಬೇಕಾದ ಅಗತ್ಯವಿಲ್ಲ. ಸ್ಥಳೀಯವಾಗಿ ಉತ್ಪಾದಿಸಿಕೊಳ್ಳಬಹುದು. ಇದು ಕಲ್ಲಿದ್ದಲಿನ ಉಪ ಉತ್ಪನ್ನ. ಜತೆಗೆ ಇದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣವೂ ಕಡಿಮೆ. ಹೀಗೆ ಎಲ್ಲ ವಿಚಾರದಲ್ಲೂ ಮಿಥನಾಲ್‌ ಪೆಟ್ರೋಲಿಗಿಂತ ಉತ್ತಮ ಎಂದು ಕಾಣಿಸುತ್ತಿರುವುದರಿಂದ ಗಡ್ಕರಿಯವರ ಸಲಹೆ ಆಕರ್ಷಣೀಯವಾಗಿ ಕಾಣಿಸುತ್ತಿದೆ. 

ಮಿಥನಾಲ್‌ ಎನ್ನುವುದು ಒಂದು ಅಲ್ಕೋಹಾಲ್‌. ಸುಡುವ ಗುಣ ಪೆಟ್ರೋಲಿಗಿಂತ ಹೆಚ್ಚಿರುವುದರಿಂದ ಇದನ್ನು ವಾಹನಗಳಲ್ಲಿ ಬಳಸುತ್ತಾರೆ.  ಕೆಲವು ದೇಶಗಳಲ್ಲಿ ಈಗಾಗಲೇ ಮಿಥನಾಲ್‌ ಬೆರೆಸುವುದು ಕಡ್ಡಾಯವಾಗಿದೆ.   ಆದರೆ ಮಿಥನಾಲ್‌, ಪೆಟ್ರೋಲು ಮಿಶ್ರಣದ ಅನುಪಾತ ಏರುಪೇರಾದರೆ  ವಾಹನಗಳ ಎಂಜಿನ್‌ಗಳಿಗೆ ಭಾರೀ ಹಾನಿ ಸಂಭವಿಸುತ್ತದೆ. ಅಲ್ಲದೆ ಮಿಥನಾಲ್‌ ಬಳಕೆಗೆ ಎಂಜಿನ್‌ಗಳಲ್ಲಿ ಚಿಕ್ಕಪುಟ್ಟ ಮಾರ್ಪಾಡು ಮಾಡಿಕೊಳ್ಳಬೇಕಿದೆ. ಹೀಗಾಗಿ, ಸಚಿವ ಐಡಿಯಾ, ಒಳಿತಿಗಿಂತ ಹೆಚ್ಚು ಕೆಡುಕಾಗಬಹುದು. ಅಲ್ಕೋಹಾಲ್‌ ಗುಣ ಹೊಂದಿರುವುದರಿಂದ ದುರುಪಯೋಗವಾಗುವ ಸಾಧ್ಯತೆಯೂ ಅಧಿಕವಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾನೂನು ರಚಿಸುವ ಅಗತ್ಯತೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next