Advertisement

ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲೂ ಆತ್ಮನಿರ್ಭರದತ್ತ ಕೇಂದ್ರದ ದಿಟ್ಟ ಹೆಜ್ಜೆ

11:55 PM Aug 03, 2023 | Team Udayavani |

ಲ್ಯಾಪ್‌ಟಾಪ್ಸ್‌, ಟ್ಲಾಬ್ಲೆಟ್ಸ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳ ಸಹಿತ ಕಂಪ್ಯೂಟರ್‌ ಸಂಬಂಧಿ ಕೆಲವು ಎಲೆಕ್ಟ್ರಾನಿಕ್‌ ಸಾಧನಗಳ ಆಮದಿಗೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರಕಾರ ಗುರುವಾರ ನಿಷೇಧ ಹೇರಿದೆ. ದೇಶೀಯವಾಗಿ ಇವುಗಳ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇ ಶದಿಂದ ಮತ್ತು ಭದ್ರತಾ ಕಾರಣಗಳಿಗಾಗಿ ಸರಕಾರ ಈ ನಿರ್ಧಾರ ಕೈಗೊಂಡಿದೆ.

Advertisement

ಆಮದು ನಿರ್ಬಂಧದ ವೇಳೆ ನಿಯಮಾವಳಿಗಳಲ್ಲಿ ಕೆಲವೊಂದು ಷರತ್ತು ಬದ್ಧ ಸಡಿಲಿಕೆಗಳನ್ನು ನೀಡಲಾಗಿದ್ದರೂ ಈ ಸಾಧನಗಳ ಆಮದಿಗೆ ಮಾನ್ಯತೆಯುಳ್ಳ ಪರವಾನಿಗೆ ಮತ್ತು ಪೂರ್ವಾನುಮತಿ ಪಡೆಯುವುದು ಅತ್ಯಗತ್ಯವಾಗಿದೆ. ಹೀಗೆ ಆಮದು ಮಾಡಿಕೊಳ್ಳಲಾಗುವ ಕಂಪ್ಯೂಟರ್‌ ಸಂಬಂಧಿ ಸಾಧನಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾತ್ರವೇ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇವುಗಳ ಮಾರಾಟ ಇಲ್ಲವೇ ಇನ್ನಿತರ ಉದ್ದೇಶಗಳಿಗಾಗಲಿ ಬಳಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಅಷ್ಟು ಮಾತ್ರವಲ್ಲದೆ ಹೀಗೆ ಆಮದು ಮಾಡಿಕೊಳ್ಳಲಾಗುವ ಈ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉದ್ದೇಶ ಪೂರ್ಣಗೊಂಡ ಬಳಿಕ ನಾಶಪಡಿಸಬೇಕು ಇಲ್ಲವೇ ಮರಳಿ ರಫ್ತು ಮಾಡುವಂತೆ ಸೂಚನೆ ನೀಡಲಾಗಿದೆ. ಉಳಿದಂತೆ ಬ್ಯಾಗೇಜ್‌ ಕಾನೂನಿನಡಿಯಲ್ಲಿ ಇವುಗಳ ಆಮದಿಗೆ ಸದ್ಯಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲವಾಗಿದ್ದರೂ ಈ ನಿಯಾಮಾವಳಿಯಲ್ಲಿ ಯಾವುದಾದರೂ ಬದಲಾವಣೆ ಇದ್ದಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡಲಾಗುವುದು ಎಂದು ಸರಕಾರ ಗುರುವಾರ ಹೊರಡಿಸಿರುವ ತನ್ನ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಆಮದಿಗೂ ನಿರ್ಬಂಧ ವಿಧಿಸುವ ಪರೋಕ್ಷ ಮುನ್ಸೂಚನೆಯನ್ನು ನೀಡಿದೆ.

ತಂತ್ರಜ್ಞಾನ, ಸಂಶೋಧನೆ ಕ್ಷೇತ್ರದಲ್ಲಿ ಭಾರತ ದಾಪುಗಾಲಿಡುತ್ತಿರುವಂತೆಯೇ ಈ ಎಲ್ಲ ಸಾಧನಗಳಿಗೆ ಭಾರೀ ಬೇಡಿಕೆ ಕುದುರಿದೆ. ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಇವುಗಳ ಉತ್ಪಾದನೆಯಾಗದಿರುವುದರಿಂದ ಇವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವರ್ಷಗಳುರುಳಿದಂತೆಯೇ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ ಸಹಿತ ಕಂಪ್ಯೂಟರ್‌ ಸಂಬಂಧಿ ಎಲೆಕ್ಟ್ರಾನಿಕ್‌ ಸಾಧನಗಳ ಆಮದು ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು, ಇದಕ್ಕಾಗಿ ದೊಡ್ಡ ಮೊತ್ತದ ವಿದೇಶಿ ವಿನಿಮಯವನ್ನು ವ್ಯಯಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ನೆರೆಯ ಚೀನದಿಂದ ಗರಿಷ್ಠ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಸರಕಾರದ ಈ ನಡೆಯಿಂದ ಈ ಎಲೆಕ್ಟ್ರಾನಿಕ್‌ ಸಾಧನಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಇನ್ನಷ್ಟು ಉತ್ತೇಜನ ಲಭಿಸಲಿದ್ದು ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅನುಕೂಲವಾಗಲಿದೆ. ದೇಶದಲ್ಲಿ ಈ ಎಲೆಕ್ಟ್ರಾನಿಕ್‌ ಸಾಧನಗಳ ಉತ್ಪಾದನೆಗೆ ಇನ್ನಷ್ಟು ಕಂಪೆನಿಗಳು ಆಸಕ್ತಿ ತೋರಲಿದ್ದು ಇದರಿಂದ ಗಣನೀಯ ಸಂಖ್ಯೆಯಲ್ಲಿ ಉದ್ಯೋ ಗಾವಕಾಶವೂ ಸೃಷ್ಟಿಯಾಗಲಿದೆ. ಇದೇ ವೇಳೆ ಈ ಸಾಧನಗಳ ಆಮದಿ ಗಾಗಿ ದೇಶದ ಬೊಕ್ಕಸದಿಂದ ವ್ಯಯವಾಗುತ್ತಿದ್ದ ಅಪಾರ ಪ್ರಮಾಣದ ವಿದೇಶಿ ವಿನಮಯವೂ ಉಳಿತಾಯವಾಗಲಿದೆ. ದೇಶದ ಭದ್ರತೆಯ ದೃಷ್ಟಿಯಿಂದಲೂ ಇದೊಂದು ಮಹತ್ವದ ನಿರ್ಧಾರವಾಗಿದೆ. ಇದೇ ವೇಳೆ ಸರಕಾರದ ಈ ನಿರ್ಧಾರದಿಂದ ಚೀನದ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ ಆರ್ಥಿಕವಾಗಿಯೂ ಪ್ರಬಲ ಹೊಡೆತ ನೀಡಿದಂತಾಗಿದೆ.

Advertisement

ಹೀಗೆ ಹಲವಾರು ದೂರಗಾಮಿ ಚಿಂತನೆಗಳಿಂದ ಕೂಡಿದ ಕೇಂದ್ರ ಸರಕಾರದ ಈ ನಿರ್ಧಾರ, ತನ್ನ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ, ಆತ್ಮ ನಿರ್ಭರ ಭಾರತ ಉಪಕ್ರಮಗಳಿಗೆ ಪೂರಕವಾಗಿದ್ದು ಎಲೆಕ್ಟ್ರಾ ನಿಕ್‌ ಕ್ಷೇತ್ರದಲ್ಲೂ ಭಾರತ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next