ಬೆಂಗಳೂರು: ಬಳ್ಳಾರಿ ಉಪ ಚುನಾವಣೆ ಗೆಲುವಿನ ನಂತರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಬಿಜಿಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಆರು ಜನ ಸಂಸದರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಪ್ರಭಾವಿ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು, ಉಪ ಚುನಾವಣೆಯ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕುವ ಪ್ರಯತ್ನ ಆರಂಭವಾಗಿದೆ. ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿ ಎಂದು ಒತ್ತಡ ಹೇರುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಮಾತುಕತೆಗೆ ಬನ್ನಿ ಎಂದು ಪರೋಕ್ಷ ಸೂಚನೆ ನೀಡುತ್ತಿದ್ದರೆ ಎಂದು ದೂರಿದರು.
ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಡಿಕೆ ಶಿವಕುಮಾರ್ ಜೈಲಿಗೆ ಶಾಂತಾ ದೆಹಲಿಗೆ ಎಂದು ಹೇಳಿರುವುದು ಅವರ ವಯಕ್ತಿಕ ಹೇಳಿಕೆಯಲ್ಲ. ಇದರ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಕೈವಾಡ ಇದೆ. ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಮೋರ್ಚಾಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಎನ್‌ಡಿಎಯಿಂದ ಹೊರ ಬಂದ ತಕ್ಷಣ ತೆಲಗುದೇಶಂ ಪಕ್ಷದ ಸಚಿವರು ಹಾಗೂ ಸಂಸದರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕಬೇಕೆಂದು ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಐಟಿ ಹಾಗೂ ಇಡಿ ಅಧಿಕಾರಿಗಳು ಯಾವುದೋ ಒಂದು ಪಕ್ಷದ ಆದೇಶ ಪಾಲಿಸುವುದು ಸರಿಯಲ್ಲ. ಇದು ಶಾಸ್ವತ ಅಧಿಕಾರ ಅಲ್ಲ. ಬಿಜೆಪಿಯವರು ತನಿಖಾ ಸಂಸ್ಥೆಗಳ ಹೆಸರು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲು ಒಂದೂವರೆ ತಿಂಗಳಿಂದ ಅವಕಾಶ ಕೋರಿದರೂ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ನಮ್ಮ ಮನೆಯ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಇಡಿಗೆ ವಹಿಸಲು ಅವಕಾಶ ಇಲ್ಲ. ಆದರೂ ಆದಾಯ ತೆರಿಗೆ ಇಲಾಖೆಯವರು ಒತ್ತಾಯ ಪೂರ್ವಕವಾಗಿ ಇಡಿಗೆ ವಹಿಸಿದ್ದಾರೆ. ರಾಜಕೀಯ ಒತ್ತಡ ಹೇರಿ ಜೈಲಿಗೆ ಕಳುಹಿಸುವ ಪ್ರಯತ್ನ ನಡೆಸಲಾಗುತ್ತಿದೆ. ನಮ್ಮನ್ನು ಜೈಲಿಗೆ ಕಳುಹಿಸಿದರೂ, ನಾವು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದರು.
ಜಾರಿ ನಿರ್ದೇಶನಾಲಯದ ನಿರ್ದೇಶಕರ ಭೇಟಿಗೆ ಪತ್ರ ಬರೆದು ಒಂದೂವರೆ ತಿಂಗಳಾದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ನಾನೂ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಾರ್ವಜನಿಕರ ವಿಷಯಗಳು ಬಂದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸುವುದು ಅವರ ಜವಾಬ್ದಾರಿ. ಇಲ್ಲದಿದ್ದರೆ ಅವರು ಯಾವುದೋ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅನಿಸುತ್ತದೆ.
– ಕೆ.ಸಿ. ರಾಮಮೂರ್ತಿ, ರಾಜ್ಯಸಭಾ ಸದಸ್ಯ.
ನಾಲ್ಕೂವರೆ ವರ್ಷದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಪ್ರತಿಪಕ್ಷಗಳ ಪ್ರಭಲ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರೆ, ಹೋರಾಟ ಮಾಡಬೇಕಾಗುತ್ತದೆ.
– ಧ್ರುವ ನಾರಾಯಣ, ಸಂಸದ.