ಭಾರತೀನಗರ: ಭಾರತೀನಗರದ ಮದ್ದೂರು -ಮಳವಳ್ಳಿ ಹೆದ್ದಾರಿಯಲ್ಲಿ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ಎಲ್ಲಾ ರೈತ ವಿರೋಧಿ ಕೃಷಿಕಾಯ್ದೆ ಹಿಂಪಡೆಯಬೇಕೆಂದು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ರೈತ ವಿರೋಧಿ ಕೃಷಿಕಾಯ್ದೆ ವಿರುದ್ಧ ಕಳೆದ ಒಂದು ವರ್ಷದಳಿಂದ ಹೋರಾಟ ನಡೆಸಿದ ರೈತ ಕೂಲಿಕಾರರಿಗೆ ಅಲ್ಪ ಜಯ ಸಿಕ್ಕಿದೆ ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ, ಮಾರುಕಟ್ಟೆ ಪರಿಮಿತಿ ಕಾಯ್ದೆ, ದಿನಬಳಕೆ ವಸ್ತುಗಳ ನಿಯಂತ್ರಣಕ್ಕೆ ಮಾಡಿದ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ. ರೈತರು ಹೋರಾಟ ನಡೆಸುತ್ತಿರುವ ಕೃಷಿಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆದಿಲ್ಲ. ಕೇವಲ ಮೂರು ಕೃಷಿಕಾಯ್ದೆ ಮಾತ್ರ ಹಿಂಪಡೆದಿದ್ದಾರೆ. ಹಾಗಾಗಿ ರೈತರಿಗೆ ಅಲ್ಪ ಜಯಸಿಕ್ಕಿದೆ ಎಂದರು.
ಕೇಂದ್ರ ಸರ್ಕಾರ ರೈತರಿಗೆ ಕಾಳಜಿ ತೋರಿಸುವುದೇ ಆದರೆ ವಿದ್ಯುತ್ ಕಾಯ್ದೆ-2020, ರೈತ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ಕಾಯ್ದೆ, ರೈತ ಕೃಷಿಕೂಲಿಕಾರರ ಸಂಘದ ಸಾಲ ಮನ್ನಾ ಮಾಡುವ ಋಣ ಮುಕ್ತಕಾಯ್ದೆ, ಕಾರ್ಮಿಕ ಕಾಯ್ದೆಗಳ ಸಂಹಿತೆ, ಗೋಹತ್ಯೆಕಾಯ್ದೆ ಇವುಗಳನ್ನು ವಾಪಸ್ ಪಡೆದಾಗ ಮಾತ್ರ ರೈತರ ಹೋರಾಟಕ್ಕೆ ಸಂಪೂರ್ಣ ಜಯಸಿಕ್ಕಿದಂತಾಗುತ್ತದೆ. ಮೂರು ಕೃಷಿಕಾಯ್ದೆ ಹಿಂಪಡೆದು ಕಣ್ಣೊರೆಸುವ ತಂತ್ರವನ್ನು ಕೇಂದ್ರ ಸರ್ಕಾರ ಮಾಡಿದೆ. 3 ಕಾಯ್ದೆ ಹಿಂಪಡೆದಾಕ್ಷಣಕ್ಕೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಕೃಷಿ ಕೂಲಿಕಾರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ.ಶಿವಮಲವಯ್ಯ, ಚಿಕ್ಕರಸಿನಕೆರೆ ವಲಯ ಸಮಿತಿ ಅಧ್ಯಕ್ಷೆ ನಾಗಮ್ಮ, ಅಣ್ಣೂರು ಮಂಚೇಗೌಡ, ಸಿದ್ದರಾಜು, ಜಯಲಕ್ಷ್ಮಮ್ಮ, ಗೌರಮ್ಮ, ಸಾಕಮ್ಮ, ಯಶೋಧಮ್ಮ ಮತ್ತಿತರರಿದ್ದರು.