Advertisement

7 ಕಡೆ ಜಲಾನಯನ ನಿರ್ವಹಣೆ ಉತ್ಕೃಷ್ಠ ಕೇಂದ್ರ: ಕೃಷಿ ಸಚಿವ ಬಿ.ಸಿ. ಪಾಟೀಲ್‌

08:48 PM Nov 03, 2022 | Team Udayavani |

ಬೆಂಗಳೂರು: “ರಾಜ್ಯದ ಏಳು ಕಡೆ ಜಲಾನಯನ ನಿರ್ವಹಣೆ ಸಂಬಂಧ ಉತ್ಕೃಷ್ಠ ಕೇಂದ್ರ (ಸೆಂಟರ್‌ ಆಫ್ ಎಕ್ಸೆಲೆನ್ಸ್‌ ಇನ್‌ ವಾಟರ್‌ಶೆಡ್‌) ಸ್ಥಾಪಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಹೆಬ್ಟಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ “ಕೃಷಿ ಮೇಳ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬೆಂಗಳೂರು, ಚಾಮರಾಜನಗರ, ಧಾರವಾಡ, ಗಂಗಾವತಿ, ಬಾಗಲಕೋಟೆ, ಶಿವಮೊಗ್ಗ ಸೇರಿ ಏಳು ಕಡೆ ಸೆಂಟರ್‌ ಆಫ್ ಎಕ್ಸೆಲೆನ್ಸ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಶೇ.15ರಷ್ಟು ಸರ್ಕಾರ ಹೂಡಿಕೆ ಮಾಡಿದರೆ, ಉಳಿದ ಶೇ. 85ರಷ್ಟು ಖಾಸಗಿ ಕಂಪನಿ ವಿನಿಯೋಗಿಸಲಿದೆ. ಇದನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಂಬಂಧ ಆದೇಶ ಕೂಡ ಹೊರಡಿಸಲಾಗಿದೆ’ ಎಂದು ತಿಳಿಸಿದರು.

ವಿಜ್ಞಾನಿಗಳು, ಕೃಷಿ ಪ್ರಾಧ್ಯಾಪಕರ ಕಾರ್ಯವ್ಯಾಪ್ತಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗದೆ, ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಸಹಾಯಕ ಪ್ರಾಧ್ಯಾಪಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು.

ಕೋಲಾರ ಮಾದರಿ: “ನನ್ನ ಪ್ರಕಾರ ಇಸ್ರೇಲ್‌ಗಿಂತ ಮೊದಲು ಕೋಲಾರ ರೈತರ ಮಾದರಿಯನ್ನು ಅನುಸರಿಸುವ ಅವಶ್ಯಕತೆ ಇದೆ. ಯಾಕೆಂದರೆ, ಅಲ್ಲಿ ಮಳೆ ತುಂಬಾ ಕಡಿಮೆ ಇದ್ದು, ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದೆ. ಅಂತರ್ಜಲಮಟ್ಟ ಸಾವಿರ ಅಡಿಗಿಂತ ಕೆಳಗೆ ಹೋಗಿದೆ. ಆದಾಗ್ಯೂ ಅಲ್ಲಿನ ರೈತರು ಗರಿಷ್ಠ ಉತ್ಪಾದನೆ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಪ್ರಶಸ್ತಿ ಪುರಸ್ಕೃತರು ಕೂಡ ಆ ಭಾಗದ ರೈತರೇ ಹೆಚ್ಚು ಇರುತ್ತಾರೆ’ ಎಂದು ಶ್ಲಾಘಿಸಿದರು.

“ಕೃಷಿಯಲ್ಲಿ ಐಟಿ ಕ್ರಾಂತಿಗೆ ಸಜ್ಜಾಗಿ’:

Advertisement

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮಾತನಾಡಿ, “ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಯ ನಂತರ ಈಗ ಕೃಷಿಯಲ್ಲಿ ಐಟಿ ಕ್ರಾಂತಿ ಆಗಲಿದೆ. ಅದಕ್ಕೆ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಬೇಕು’ ಎಂದು ಕರೆ ನೀಡಿದರು.

ಕೃಷಿಗೆ ಸಂಬಂಧಿಸಿದಂತೆ ಹಿಂದಿನ ಯಾವುದೇ ಕ್ರಾಂತಿಯಾದಾಗಲೂ ಬಹುದೊಡ್ಡ ಬದಲಾವಣೆಗಳಾಗಿವೆ. ಉತ್ಪಾದಕತೆ ಹೆಚ್ಚಳದ ಜತೆಗೆ ರೈತರ ಬದುಕು ಕೂಡ ಹಸನಾಗಿದೆ. ಮುಂಬರುವ ದಿನಗಳಲ್ಲಿ ಕೃಷಿಯಲ್ಲಿ ಐಟಿ ಕ್ರಾಂತಿ ಆಗುವ ಎಲ್ಲ ಸಾಧ್ಯತೆಗಳೂ ಇವೆ. ಅದಕ್ಕೆ ಈಗಿನಿಂದಲೇ ನಾವು ಸಜ್ಜಾಗಬೇಕು. ಕೃಷಿಯಲ್ಲಿ ತಂತ್ರಜ್ಞಾನಗಳ ಅಳವಡಿಕೆ ಮೂಲಕ ಮತ್ತಷ್ಟು ಪ್ರಗತಿ ಸಾಧಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಇಸ್ರೇಲ್‌ ನಮಗೆ ಮಾದರಿಯಾಗಿದೆ ಎಂದ ರಾಜ್ಯಪಾಲರು, ಆ ದೇಶದಲ್ಲಿ ಮಳೆಯ ಪ್ರಮಾಣ ಕೇವಲ ಸರಾಸರಿ ಶೇ. 9ರಿಂದ 10ರಷ್ಟಿದೆ. ಆದರೆ, ಕೃಷಿಯಲ್ಲಿ ಅದರ ಸಾಧನೆ ಉಳಿದೆಲ್ಲ ದೇಶಗಳಿಗಿಂತ ಹೆಚ್ಚಿದೆ. ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಇಸ್ರೇಲ್‌ ಸಾಕಷ್ಟು ಮುಂದಿದೆ. ಕರ್ನಾಟಕ ಕೂಡ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇನ್ನಷ್ಟು ವೃದ್ಧಿ ಸಾಧಿಸಬೇಕಾಗಿದೆ. ಇದಕ್ಕಾಗಿ ಪುಷ್ಪ ಕೃಷಿ, ಔಷಧೀಯ ಉತ್ಪನ್ನಗಳ ಕೃಷಿಯ ಜತೆಗೆ  ಸಮಗ್ರ ಕೃಷಿಗೆ ಒತ್ತು ನೀಡಬೇಕು ಎಂದರು. ಕುಲಪತಿ ಡಾ.ಎಸ್‌.ವಿ.ಸುರೇಶ್‌, ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next