Advertisement

ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ಮರುಚಾಲನೆಗೆ 25ಸಾವಿರ ಕೋಟಿ ರೂ. ಪ್ಯಾಕೇಜ್

10:16 AM Nov 07, 2019 | Hari Prasad |

ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಆ ಮೂಲಕ ತಳಕಂಡಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅರ್ಧಕ್ಕೇ ನಿಂತುಹೋಗಿರುವ ಸುಮಾರು 1600 ಪ್ರಾಜೆಕ್ಟ್ ಗಳ ಮರುಚಾಲನೆಗಾಗಿ 25ಸಾವಿರ ಕೋಟಿ ರೂಪಾಯಿಗಳ ನಿಧಿ ಮೀಸಲಿಟ್ಟಿದೆ.

Advertisement

ಮನೆ ಖರೀದಿದಾರರಿಗೆ ಇದರಿಂದ ಭಾರೀ ಪ್ರಯೋಜನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತು ಈ ಉದ್ದೇಶಕ್ಕಾಗಿ ಬದಲೀ ಹೂಡಿಕೆ ನಿಧಿ (AIF) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು ತನ್ನ ಒಪ್ಪಿಗೆಯನ್ನು ಸೂಚಿಸಿದೆ.

ದೇಶದಲ್ಲಿನ ಅತೀದೊಡ್ಡ ಬ್ಯಾಂಕಿಂಗ್ ಜಾಲವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್.ಐ.ಸಿ. ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಎ.ಐ.ಎಫ್. ನಿಧಿಯಲ್ಲಿ ಒಟ್ಟು 25 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ. ಈ ನಿಧಿಯನ್ನು ದೇಶದಲ್ಲಿ ಅರ್ಧಕ್ಕೆ ನಿಂತಿರುವ ಗೃಹನಿರ್ಮಾಣ ಕಾಮಗಾರಿಗಳ ಮರುಚಾಲನೆಗೆ ಬಳಸಲಾಗುವುದು ಎಂಬ ವಿಚಾರವನ್ನು ಕೇಂದ್ರ ಸಂಪುಟ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರಕಾರದ ಈ ಮಹತ್ವದ ಉತ್ತೇಜನಾ ಕ್ರಮದಿಂದ ದೇಶದೆಲ್ಲೆಡೆ ಅರ್ಧಕ್ಕೆ ಸ್ಥಗಿತಗೊಂಡಿರುವ 4.58 ಲಕ್ಷ ಗೃಹ ನಿರ್ಮಾಣ ಕಾಮಗಾರಿ ಸೇರಿದಂತೆ 1,600 ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಿಗೆ ಇದರಿಂದ ಸಹಕಾರಿಯಾಗಲಿದೆ ಎಂಬ ಅಂಶವನ್ನು ಹಣಕಾಸು ಸಚಿವರು ಬೊಟ್ಟು ಮಾಡಿದರು.

ಇನ್ನು ಈ ಉತ್ತೇಜನಾ ಕ್ರಮದ ಪ್ರಯೋಜನವನ್ನು ಮನೆ ಖರೀದಿದಾರರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವ ವಿಧಾನಗಳ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಜೊತೆ ಈಗಾಗಲೇ ಚರ್ಚಿಸಿರುವುದಾಗಿಯೂ ಸೀತಾರಾಮನ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಇನ್ನು ಈ ಉದ್ದೇಶಕ್ಕಾಗಿ ಸ್ಥಾಪಿಸಲಾಗುವ ಈ ನಿಧಿಯಲ್ಲಿ ಕೇಂದ್ರ ಸರಕಾರವು 10 ಸಾವಿರ ಕೋಟಿ ರೂಪಾಯಿಗಳನ್ನು ಪ್ರಾರಂಭಿಕ ಮೊತ್ತವಾಗಿ ಹೂಡಿಕೆ ಮಾಡಲಿರುವುದು ಹಾಗೆಯೇ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಉಳಿದ ಮೊತ್ತವನ್ನು ಹೂಡಿಕೆ ಮಾಡಲಿವೆ. ಹೀಗೆ ಒಟ್ಟಾರೆಯಾಗಿ ಬದಲೀ ಹೂಡಿಕೆ ನಿಧಿಯಲ್ಲಿ (AIF) ಪ್ರಾರಂಭಿಕ ಹಂತದಲ್ಲಿ 25 ಸಾವಿರ ಕೋಟಿ ರೂಪಾಯಿಗಳ ಮೂಲ ಹೂಡಿಕೆ ನಡೆಯಲಿದೆ ಎಂದು ಈ ಯೋಜನೆಯ ಕಾರ್ಯವಿಧಾನವನ್ನು ಕೇಂದ್ರ ಹಣಕಾಸು ಸಚಿವರು ವಿವರಿಸಿದರು.

ಹಂತ ಹಂತವಾಗಿ ಈ ನಿಧಿಯನ್ನು ಬಿಡುಗಡೆ ಮಾಡಲಿದ್ದು ಎನ್.ಪಿ.ಎ.ಗೊಂಡಿರುವ ಗೃಹ ನಿರ್ಮಾಣ ಪ್ರಾಜೆಕ್ಟ್ ಗಳು ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ಟ್ರಿಬ್ಯೂನಲ್ ದಿವಾಳಿ ಕೋರ್ಟ್ ನಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಗೃಹನಿರ್ಮಾಣ ಪ್ರಾಜೆಕ್ಟ್ ಗಳಿಗೂ ಸಹ ಈ ಸಹಾಯಧನ ಲಭಿಸಲಿದೆ ಎಂಬ ಮಾಹಿತಿಯನ್ನು ಹಣಕಾಸು ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.

ಈ ಮಹತ್ವದ ಘೋಷಣೆಯಿಂದ ದೇಶದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರವು ಮತ್ತೆ ಚೇತರಿಸಿಕೊಳ್ಳುವ ಆಶಾವಾದ ವ್ಯಕ್ತವಾಗಿದೆ. ಗೃಹನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದು ಮಾತ್ರವಲ್ಲದೇ ಗೃಹನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿಗಳಾಗಿರುವ ಸಿಮೆಂಟು, ಕಬ್ಬಿಣ ಮತ್ತು ಸ್ಟೀಲ್ ಉದ್ಯಮಗಳಿಗೂ ಸಹ ಇದರ ಪ್ರಯೋಜನ ಲಭಿಸುವ ಆಶಾವಾದವನ್ನು ಕೇಂದ್ರ ಸರಕಾರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next