Advertisement
ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ಬಹುದೊಡ್ಡ ಸಾಂಸ್ಕೃತಿಕ ಆಯಾಮವನ್ನು ಹೊಂದಿರುವ ಕ್ರೀಡೆಯಾಗಿದೆ. ಪರಿಷ್ಕೃತ ಮಸೂದೆಗೆ ಶೀಘ್ರದಲ್ಲಿ ರಾಷ್ಟ್ರಪತಿಯವರ ಅಂಕಿತ ಬೀಳುವ ವಿಶ್ವಾಸವಿದೆ. ಈ ಮೂಲಕ ಇಲ್ಲಿನ ಬಹುಪರಂಪರೆಯ ಕಂಬಳ ಕ್ರೀಡೆಗೆ ಅವಕಾಶ ದೊರೆಯಲಿದೆ ಎಂದರು.
ದೇಶದ ಕೆಲವು ಕಡೆಗಳಲ್ಲಿ ಮಾತ್ರ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ (ಎನ್‌ಐಇಎಲ್‌ಐಟಿ) ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. ಈ ಶಿಕ್ಷಣ ಸಂಸ್ಥೆಯ ಮೂಲಕ ಜಾಗತಿಕವಾಗಿ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ. ಪ್ರತೀ ರಾಜ್ಯದ ರಾಜಧಾನಿಯಲ್ಲಿ ಈ ಕೇಂದ್ರ ಸ್ಥಾಪನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಪ್ರಸ್ತುತ ಮಂಗಳೂರು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದಲ್ಲಿಯೇ ಹೊಸ ಸಾಧನೆಯನ್ನು ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಇಲ್ಲಿನ ಶೈಕ್ಷಣಿಕ ಶ್ರೇಷ್ಠತೆಯ ಕಾರಣದಿಂದಾಗಿ ಇಲ್ಲೂ ಕೂಡ ರಾಷ್ಟ್ರೀಯ ಕೇಂದ್ರವನ್ನು ತೆರೆಯಬಹುದಾಗಿದೆ. ಸಂಸದ ನಳಿನ್ ಕುಮಾರ್ ಅವರು ಮನವಿ ಸಲ್ಲಿಸಿದರೆ ಇಲ್ಲೂ ಕೂಡ ಕೇಂದ್ರ ತೆರೆಯಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದರು. ಮಂಗಳೂರಿಗೆ ಐಟಿ ಪಾರ್ಕ್
ಮಂಗಳೂರಿನಲ್ಲಿ ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಇದರ ವಿಸ್ತರಣೆ ಹಾಗೂ ಇಲ್ಲಿನ ಶೈಕ್ಷಣಿಕ ಸಾಧನೆಯ ಹಿನ್ನೆಲೆಯಲ್ಲಿ ಇಲ್ಲಿಗೂ ಕೂಡ ಐಟಿ ಪಾರ್ಕ್ ನೀಡುವಂತೆ ಸಂಸದ ನಳಿನ್ ಅವರು ಈಗಾಗಲೇ ಮನವಿ ಮಾಡಿದ್ದಾರೆ. ರಾಜ್ಯ ಸರಕಾರ ಸೂಕ್ತ ಸ್ಥಳಾವಕಾಶ ನೀಡಿದರೆ ಕೇಂದ್ರ ಸರಕಾರ ಐಟಿ ಪಾರ್ಕ್ ನೀಡುವುದಕ್ಕೆ ಎಲ್ಲ ಸಹಕಾರ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
Related Articles
ದೇಶದಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಈಗಾಗಲೇ ತನ್ನ ವೇಗವನ್ನು ಪಡೆದುಕೊಂಡಿದೆ. ಪ್ರಸ್ತುತ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದನೆಯ ಮಟ್ಟಕ್ಕಿಂತ ಸುಮಾರು ಮೂರು ಪಟ್ಟು ಅಧಿಕವಾಗಿ ಆಮದು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ ವಸ್ತುಗಳ ಆಮದಿಗೆ ನಿಯಂತ್ರಣ ಹೇರಿ ದೇಶದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ “ಮೇಕ್ ಇನ್ ಇಂಡಿಯಾ’ದಡಿ ಉತ್ತೇಜನ ನೀಡಲಾಗುತ್ತಿದ್ದು, 20:20ಯಲ್ಲಿ ಇದನ್ನು ಪೂರ್ಣ ರೀತಿಯಲ್ಲಿ ಸಾಧಿಸಲಿದ್ದೇವೆ ಎಂದು ಚೌಧರಿ ಹೇಳಿದರು.
Advertisement
ಕೇಂದ್ರ ಸರಕಾರ ಕೈಗೊಂಡ ಗೋ ಮಾರಾಟ ಹಾಗೂ ಸಾಗಾಟದ ಮೇಲಿನ ಕೆಲವು ನಿರ್ಬಂಧದ ಬಗೆಗೆ ಎದ್ದಿರುವ ವಿರೋಧದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋ ಹತ್ಯೆ ಕುರಿತಂತೆ ಈಗ ಇರುವ ನಿಯಮಾವಳಿಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಹೊಸ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ ಕೆಲವರು ಇದನ್ನು ತಪ್ಪು ದಾರಿಗೆ ಎಳೆದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.