Advertisement
ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಐದಾರು ಜಿಲ್ಲೆಗಳಲ್ಲಿ ರಾಗಿ ಬೆಳೆದ ರೈತರಿಗೆ ಬೆಲೆ ಸಿಗಬೇಕೆಂಬ ಕಾರಣದಿಂದ ಮೊದಲು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಯಿತು. ಪುನ: ಬೇಡಿಕೆ ಬಂದ ಹಿನ್ನೆಲೆಯಲ್ಲಿ 485 ಕೋಟಿ ರೂ.ಗಳನ್ನು ಮಂಜೂರು ಮಾಡಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಯಿತು. ರಾಗಿ ಹೆಚ್ಚು ಬೆಳೆದ್ದದ್ದರಿಂದ ಖರೀದಿಗೆ ರೈತರ ಒತ್ತಾಸೆಯ ಮೇರೆಗೆ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಸಮಯ ನಿಗದಿ ಮಾಡಲಾಗಿದೆ. ನ್ಯಾಯಮೂರ್ತಿಗಳ ಹುದ್ದೆ ಖಾಲಿಯಾಗುವ ಆರು ತಿಂಗಳು ಮುನ್ನವೇ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿ ಆರು ತಿಂಗಳೊಳಗೆ ಮುಗಿಯಬೇಕು. ರಾಜ್ಯ ಮಟ್ಟದಲ್ಲಿ, ಕೇಂದ್ರ ಮಟ್ಟದಲ್ಲಿ ಹಾಗೂ ಸವೋಚ್ಛ ನ್ಯಾಯಾಲಯದಲ್ಲಿ ಎಷ್ಟು ದಿನಗಳು ಎನ್ನುವುದನ್ನು ಈಗಾಗಲೇ ಇರುವ ತೀರ್ಪಿನಂತೆ ಮಾಡಬೇಕು. ಕೆಳಹಂತದ ಅಧಿಕಾರಿಗಳನ್ನು ತುಂಬುವ ಕೆಲಸವೂ ಆಗಬೇಕು ಎಂಬ ಪ್ರಮುಖ ನಿರ್ಣಯಗಳು ಸಮ್ಮೇಳನದಲ್ಲಿ ಆಗಿವೆ ಎಂದರು.