Advertisement

ಬೀಡಿನರಸರ ಶ್ರಮ, ಶಿಕ್ಷಣ ಪ್ರೇಮದಿಂದ ಉದಿಸಿದ ಶತಮಾನೋತ್ತರ ಶಾಲೆ

12:00 AM Nov 24, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಪಡುಬಿದ್ರಿ: ತುಳುನಾಡಿನ ಇತಿಹಾಸದಲ್ಲಿ ಆಳ್ವಿಕೆಯನ್ನು ನಡೆಸಿದ್ದ ಎರ್ಮಾಳು ಬೀಡಿನ ಅರಸು ಪರಂಪರೆಯ ಕುಮಾರಯ್ಯ ಅರಸು ಮಾರಮ್ಮ ಹೆಗ್ಗಡೆ ಅವರು ಆಗಿನ ಕಾಲದಲ್ಲಿ ಜಿಲ್ಲಾ ಬೋರ್ಡ್‌ ಸದಸ್ಯರಾಗಿದ್ದರು. ಆ ಕಾಲದಲ್ಲಿ ಮೂಲ್ಕಿಯಿಂದ ಕಾಪುವರೆಗಿನ ವ್ಯಾಪ್ತಿಯಲ್ಲಿ ಒಂದು ಶಾಲಾರಂಭಕ್ಕೆ ಬ್ರಿಟಿಷ್‌ಸರಕಾರವು ಅನುಮತಿಯನ್ನು ನೀಡಿತ್ತು. ಹಾಗಾಗಿ ಶಿಕ್ಷಣ ಪ್ರೇಮಿಯೂ ಆಗಿದ್ದ ಕುಮಾರಯ್ಯ ಅರಸು ಮಾರಮ್ಮ ಹೆಗ್ಗಡೆ ಅವರು ದಕ್ಕಿದ ಶಾಲಾ ಮಂಜೂರಾತಿಯನ್ನು ಕೈಚೆಲ್ಲಬಾರದೆಂಬಂತೆ ತಮ್ಮದೇ ಬೀಡಿನ ಜಾಗದಲ್ಲಿದ್ದ ಮಗ್ಗದ ಯಂತ್ರಗಳಿದ್ದ ಕಟ್ಟಡವನ್ನೇ ತೋರಿಸಿ ಸುಣ್ಣಬಣ್ಣ ಬಳಿದು “ಮಗ್ಗದ ಶಾಲೆ’ಯನ್ನು ಆರಂಭಿಸಲಾಯಿತು. ಮುಂದೆ ಕೃಷ್ಣಪ್ಪ ಮಾಸ್ಟರರ ಮನೆ ಸಮೀಪದ ಕಟ್ಟಡದಲ್ಲಿ ಇದುವೇ ಬೋರ್ಡ್‌ ಶಾಲೆಯಾಗಿ ಮಾರ್ಪಟ್ಟಿತು.

ಪ್ರಸ್ತುತ 41 ವಿದ್ಯಾರ್ಥಿಗಳು
ಎರ್ಮಾಳು ಬೋರ್ಡ್‌ ಶಾಲೆಗೆ ಆ ಕಾಲದಲ್ಲಿ ಉಚ್ಚಿಲ, ಪಣಿಯೂರು, ಬೆಳಪು, ಪಾದೆಬೆಟ್ಟು, ಅದಮಾರುಗಳಿಂದ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. 1959ರ ವೇಳೆ ಪಡುಬಿದ್ರಿಯಿಂದ ಬರುತ್ತಿದ್ದ ದಿ | ವೆಂಕಟರಮಣ ಆಚಾರ್ಯ ಅವರು ಇಲ್ಲಿ ಹೆಡ್‌ಮಾಸ್ಟರ್‌ ಆಗಿದ್ದಾಗ ಶಾಲಾ ವಿಸ್ತೃತ ಕಟ್ಟಡ ನಿರ್ಮಾಣವಾಯಿತು. ಆ ವೇಳೆ ಶಾಲೆಯಲ್ಲಿ ಸುಮಾರು 89 ವಿದ್ಯಾರ್ಥಿಗಳಿದ್ದರು. ಪ್ರಸ್ತುತ 41 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹೆಮ್ಮೆಯ ಹಳೆಯ ವಿದ್ಯಾರ್ಥಿಗಳು
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ | ವೀರೇಂದ್ರ ಹೆಗ್ಗಡೆ ಅವರ ತಂದೆಯವರಾದ ದಿ| ರತ್ನವರ್ಮ ಹೆಗ್ಗಡೆ, ಕೃಷಿಕರಾಗಿದ್ದ ದಿ| ಪುಚ್ಚೊಟ್ಟು ಲೋಕಯ್ಯ ಶೆಟ್ಟಿ, ಅಶೋಕರಾಜ ಎರ್ಮಾಳು ಬೀಡು, ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಾನಪದ ವಿದ್ವಾಂಸ ಡಾ| ವೈ. ಎನ್‌. ಶೆಟ್ಟಿ ಸಹಿತ ಮುಂಬಯಿ, ಪೂನಾಗಳಲ್ಲಿನ ನಮ್ಮೂರ ಹೊಟೇಲ್‌ ಉದ್ಯಮಿಗಳು ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಸದ್ಯ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ 41 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಗೈಯ್ಯುತ್ತಿರುವರು. 2014 -15ರಲ್ಲಿ ನಾನು ಮುಖ್ಯ ಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಾಗ 29ಕ್ಕೆ ಇಳಿದಿದ್ದ ವಿದ್ಯಾರ್ಥಿಗಳು ನಮ್ಮ ಸಹ ಶಿಕ್ಷಕಿಯರ ಸಹಕಾರ, ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹದಿಂದ ಈಗ ಈ ಮಟ್ಟಕ್ಕೇರಿದೆ. ಶಾಲೆಯ ಅಭಿವೃದ್ಧಿಗೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಅವರ ಪ್ರೋತ್ಸಾಹವೇ ಕಾರಣವಾಗಿದೆ. ದಾನಿಗಳು ನಮಗೆ ಬಹಳಷ್ಟು ಸಹಕಾರವನ್ನೀಯುತ್ತಿದ್ದಾರೆ.
-ವಿನೋದಾ, ಮುಖ್ಯ ಶಿಕ್ಷಕಿ

Advertisement

ನಾವು ಕಲಿತ ಶಾಲೆ ಎಂಬ ಹೆಮ್ಮೆ ತಮಗಿದೆ. 2010ರಲ್ಲಿ ಶಾಲಾ ಶತಮಾನೋತ್ಸವವನ್ನು ನಡೆಸಿದ್ದೇವೆ. ಬಯಲು ರಂಗಮಂದಿರ, ಶಾಲಾ ಅಧ್ಯಯನ ಕೊಠಡಿಗಳುಳ್ಳ ಕಟ್ಟಡವನ್ನು ಆ ಸಂದರ್ಭದಲ್ಲಿ ಸಮರ್ಪಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳಿಗೆ ದಾನಿ, ಮುಂಬಯಿ ಉದ್ಯಮಿ ಹರೀಶ್‌ ಶೆಟ್ಟಿ ಅವರು ಯೂನಿಫಾರ್ಮ್ ಗಳನ್ನು ಕಳೆದ ಹತ್ತು ವರ್ಷಗಳಿಂದ ನೀಡುತ್ತಿರುವರು. ಪೂನಾ ಉದ್ಯಮಿ, ಪುಚ್ಚೊಟ್ಟು ಚಂದ್ರಹಾಸ ಶೆಟ್ಟಿ ಅವರು ಮಕ್ಕಳಿಗೆ ಶಾಲಾ ಬ್ಯಾಗ್‌ಗಳು, ಬರವಣಿಗೆ ಪುಸ್ತಕಗಳನ್ನೂ ನೀಡುತ್ತಿರುವರು. ಈ ಎಲ್ಲಾ ದಾನಿಗಳ ಸಹಾಯಗಳೊಂದಿಗೆ ಶತಮಾನೋತ್ತರ 14ವರ್ಷಗಳನ್ನು ಪೂರೈಸಿದ ಸರಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ಇನ್ನಷ್ಟು ಅಭಿವೃದ್ದಿಯತ್ತ ಒಯ್ಯಲು ಶಾಲಾ ಹಳೆ ವಿದ್ಯಾರ್ಥಿ ಸಂಘವೂ ಶ್ರಮಿಸುತ್ತಿದೆ.
-ಶಿವಪ್ರಸಾದ ಶೆಟ್ಟಿ ಎಲ್ಲದಡಿ,
ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ

-   ಆರಾಮ

Advertisement

Udayavani is now on Telegram. Click here to join our channel and stay updated with the latest news.

Next