ಕುಂದಗೋಳ: ಭಾರತೀಯ ಸಂಗೀತ ಪರಂಪರೆಗೆ ಕುಂದಗೋಳ ತನ್ನದೇ ಆದ ಕೊಡುಗೆ ನೀಡಿದೆ. ಪಂ| ಭೀಮಸೇನ ಜೋಶಿಯವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ ಇಲ್ಲಿಯೇ ನಡೆಯಬೇಕೆಂದು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಡಾ| ಬಂಡು ಕುಲಕರ್ಣಿ ಹೇಳಿದರು.
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಮಂಗಳವಾರ ಕನ್ನಡ-ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಸವಾಯಿ ಗಂಧರ್ವರ ಸ್ಮಾರಕ ವಿಶ್ವಸ್ಥ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತರತ್ನ ಪಂ| ಭೀಮಸೇನ ಜೋಶಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂ| ಜೋಶಿಯವರು ಗದಗ ಜಿಲ್ಲೆಯಲ್ಲಿ ಜನಿಸಿ ಕುಂದಗೋಳ ನಾಡಗೀರ ವಾಡೆಯಲ್ಲಿ ಸಂಗೀತ ಕರಗತ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತಸುಧೆ ಹರಿಸಿದ್ದಾರೆ. ಸಂಗೀತ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ವಾಸುದೇವಕಿ ನಾಟ್ಯ ಸಭೆಯಲ್ಲಿ ಅಭಿನಯ ಸಹ ಮಾಡಿ ಸಂಗೀತದ ಜೊತೆಗೆ ನಾಟಕದಲ್ಲಿಯೂ ಅಭಿರುಚಿ ಹೊಂದಿದ್ದರು ಎಂದರು.
ಕುಂದಗೋಳ ನಾಡಗೀರ ವಾಡೆ ಅನೇಕ ಸಂಗೀತ ಕಲಾವಿದರಿಗೆ ಆಶ್ರಯ ತಾಣವಾಗಿದೆ. ಈ ಪರಂಪರೆ ಮುಂದಿನ ಯುವ ಪೀಳಿಗೆಯಲ್ಲಿ ಉಳಿಯುವಂತೆ ಇಲ್ಲಿನ ಸಮಿತಿಯವರು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಸ್ಥ ಸಮಿತಿ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ, ಸವಾಯಿ ಗಂಧರ್ವರು ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಶಿಷ್ಯಪರಂಪರೆ ಹೊಂದಿದ್ದಾರೆ. ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಗಂಧರ್ವರ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗಿಲ್ಲ. ಪ್ರಸಕ್ತ ವರ್ಷ ಮುಖ್ಯಮಂತ್ರಿಗಳನ್ನು ಕರೆಯಿಸಿ ಅದ್ಧೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯ ಸಂಗೀತ ನೃತ್ಯ ಅಕಾಡೆಮಿ ರಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಟಿ.ಎಸ್. ಗೌಡಪ್ಪನವರ, ಅಶೋಕ ನಾಡಗೇರ, ಜಿತೇಂದ್ರ ಕುಲಕರ್ಣಿ, ಆರ್.ಐ. ಬ್ಯಾಹಟ್ಟಿ, ಎ.ಕೆ. ಕುಲಕರ್ಣಿ, ಸಿದ್ದು ಧಾರವಾಡಶೆಟ್ರಾ, ಶಂಕರಗೌಡ ದೊಡಮನಿ, ಬಾಬಾಜಾನ ಮಿಶ್ರಿಕೋಟಿ ಉಪಸ್ಥಿತರಿದ್ದರು.
ಹೇಮಾ ವಾಘಮೋಡೆ ಸ್ವಾಗತಿಸಿದರು. ಎ.ಕೆ. ಕುಲಕರ್ಣಿ ನಿರೂಪಿಸಿದರು. ನಂತರ ಸಂಗೀತ ಕಾರ್ಯಕ್ರಮಗಳಲ್ಲಿ ಪಂ| ಬಸವರಾಜ ಹೆಡಿಗೊಂಡ ಅವರಿಂದ ಶಹನಾಯಿ ವಾದನ, ಪಂ| ಅಶೋಕ ನಾಡಗೀರ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ, ಕೊಪ್ಪಳದ ಪಂ| ಸದಾಶಿವ ಪಾಟೀಲರಿಂದ ಭಕ್ತಿ ಸಂಗೀತ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ನಾಡಗೀತೆ ಸೇರಿದಂತೆ ಸಂಗೀತ ಸೇವೆ ಜರುಗಿತು.