ಹೊಸನಗರ: ಸರ್ಕಾರಿ ಶಾಲೆಯೊಂದು ನೂರು ವರ್ಷ ಪೂರೈಸಿದೆ. ಇಂತಹ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ನಾನು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದು ಅಕ್ಷರ ಸಂತ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನುಡಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
ಈ ಶಾಲೆಯನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗುತ್ತಿದೆ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದೆ. ನಮ್ಮ ಶಾಲೆಗೂ ಕೂಡ ಸರ್ಕಾರ ಹಲವು ಅನುದಾನಗಳನ್ನು ನೀಡುತ್ತಿದೆ. ಇದು ಅತ್ಯಂತ ಸಂತೋಷಕರ ಸಂಗತಿ. ಈ ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೆ ನಾನು ಧನ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ ಜೆ., ಪ್ರತಿಯೊಬ್ಬ ವ್ಯಕ್ತಿಗೆ ಸಂಸ್ಕಾರ ಮತ್ತು ವಿದ್ಯೆ ಅತ್ಯಂತ ಮುಖ್ಯ. ಇವೆರಡನ್ನು ಗಳಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣಗೊಳ್ಳುತ್ತದೆ. ಇಂತಹ ಸಂಸ್ಕಾರ ಹಾಗೂ ವಿದ್ಯೆಯನ್ನು ಕಲಿಸುವಂತಹ ನಿಟ್ಟಿನಲ್ಲಿ ಶಾಲೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ನೂರು ವರ್ಷ ಪೂರೈಸಿರುವ ಮತ್ತಿಕೈ ಶಾಲೆಯ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಏರಿಸುವ ಜವಾಬ್ದಾರಿ ಯುವ ಪೀಳಿಗೆಯದಾಗಿದ್ದು ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ದೇಶಕ್ಕೆ ಕೀರ್ತಿ ತರುವ ಮೂಲಕ ಈ ಶಾಲೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕುಮಾರ್ ಎಸ್ ಮಾತನಾಡಿ, ಇಡೀ ರಾಜ್ಯದಲ್ಲೇ ಒಂದು ಶಾಲೆ ಸತತ ಒಂದು ವರ್ಷಗಳ ಕಾಲ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಿದೆ ಎಂದರೆ ಅದು ನಮ್ಮ ಶಾಲೆ ಇದಕ್ಕೆ ಕಾರಣ. ಈ ಊರಿನವರ ಪ್ರೋತ್ಸಾಹ ಹಾಗೂ ಪೋಷಕರ ಉತ್ಸಾಹ ಎಂದರು.
ಸಮಾರಂಭದಲ್ಲಿ ಸಮಾಜದ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ ಮೂರ್ತಿ (ಅಮೃತ್ ನೋನಿ MD of Valyu Product Pvt. Ltd ಶಿವಮೊಗ್ಗ), ಕೆ ವಿ ಕೃಷ್ಣಮೂರ್ತಿ, ನಿರ್ದೇಶಕರು ಮಾಮ್ ಕೋಸ್, ಶಿವಮೊಗ್ಗ, ಸುಬ್ರಮಣ್ಯ ಒಡ್ಡಿನಬೈಲು ನಿರ್ದೇಶಕರು ಮಾಮ್ ಕೋಸ್ , ಶಿವಮೊಗ್ಗ, ಡಿಕೆ ಸತ್ಯನಾರಾಯಣ ಮಾನ್ಯ ಅಧ್ಯಕ್ಷರು ಸಂತೆಕಟ್ಟೆ ಗ್ರಾಮ ಪಂಚಾಯ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು