Advertisement

ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ !

06:33 PM Jan 24, 2023 | Team Udayavani |

ಕೊಪ್ಪಳ: ದೇಶಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿರುವ ಹೊತ್ತಲ್ಲಿ ಕಳೆದ 75 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದವರು ಕಾಣಸಿಗೋದು ಬಹಳ ಅಪರೂಪ. ಆದರೆ ಕೊಪ್ಪಳ ಜಿಲ್ಲೆಯ ಶತಾಯುಷಿಯೊಬ್ಬರು 1952ರಿಂದ ನಡೆದ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ.

Advertisement

ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರಮಠ ಮೊದಲ ಚುನಾವಣೆ ಯಿಂದ ಹಿಡಿದು ಈವರೆಗಿನ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ಚಲಾಯಿಸಿ ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗದ ಗೌರವಕ್ಕೂ ಪಾತ್ರರಾಗಿದ್ದಾರೆ.  ಬಸಮ್ಮ ಮೂಲತಃ ಕುಕನೂರು ತಾಲೂಕಿನ ಇಟಗಿ ಗ್ರಾಮದವರು. ಮದುವೆಯಾದ ಬಳಿಕ ಪತಿ ಮಡಿವಾಳಯ್ಯ ಅವರ ಊರು ಅಗಳಕೇರಾದಲ್ಲಿ ನೆಲೆಸಿ ಕೃಷಿ ಜೀವನ ನಡೆಸಿ ಕೊಂಡು ಬಂದಿದ್ದಾರೆ. ವಿಶೇಷವೆಂದರೆ ಬಸಮ್ಮ ಅನಕ್ಷರಸ್ಥೆ. ಆದಾಗ್ಯೂ ಚುನಾವಣೆ ವೇಳೆ ತಾವೂ ಮತದಾನ ಮಾಡಿ, ಇತರರಿಗೂ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸುತ್ತಾರೆ. ಕೊಪ್ಪಳ ಕ್ಷೇತ್ರದ ಮಟ್ಟಿಗೆ 16 ಚುನಾವಣೆಗಳನ್ನು ಕಂಡಿದ್ದಾರೆ. ಇಲ್ಲೊಂದು ಉಪ ಚುನಾವಣೆ ಎದುರಾಗಿದ್ದು, ಅದರಲ್ಲೂ ಬಸಮ್ಮ ಮತದಾನ ಮಾಡಿದ್ದಾರೆ.

ಈ ನಡುವೆ ಶತಾಯುಷಿ ಬಸಮ್ಮ ತಪ್ಪದೇ ಮತದಾನ ಮಾಡುವುದನ್ನು ಗಮನಿಸಿರುವ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಅವರಿಂದಲೇ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವದ ತೆಪ್ಪೋತ್ಸವಕ್ಕೆ ಚಾಲನೆ ಕೊಡಿಸಿ ಗೌರವಿಸಿದ್ದಾರೆ.

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next