Advertisement

ಎಲ್ಲೆಲ್ಲೂ ವಲಸೆ ಹಕ್ಕಿಗಳ ನಿನಾದ

11:38 PM Jan 11, 2020 | Team Udayavani |

ಕಾಸರಗೋಡು: ಜಿಲ್ಲೆಯ ಪಕ್ಷಿ ಪ್ರೇಮಿ ತಂಡದಿಂದ ಜಲ ಪಕ್ಷಿಗಳ ಗಣತಿ ಪ್ರಾರಂಭವಾಯಿತು. ಅಂತಾ ರಾಷ್ಟ್ರೀಯ ವಾಟರ್‌ ಬರ್ಡ್‌ ಕೌಂಟ್‌ (ಎಡಬ್ಲ್ಯೂಸಿ) ಕಾರ್ಯಕ್ರಮದ ಭಾಗವಾಗಿರುವ ಗಣತಿಯು ಸಂಪೂರ್ಣ ನಾಗರಿಕ- ವಿಜ್ಞಾನದ ಮೂಲಕ ನೆರವೇರುತ್ತಿದೆ.

Advertisement

ಪ್ರತಿ ವರ್ಷ ಜನವರಿ ತಿಂಗಳಲ್ಲಿ ವಿಶ್ವದಾದ್ಯಂತ ಗದ್ದೆಗಳು, ಕೆರೆ-ಹಳ್ಳಗಳು, ನದಿ – ಸಮುದ್ರಗಳಲ್ಲಿ ಪಕ್ಷಿ ನಿರೀಕ್ಷಣೆ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿ ಕೊಳ್ಳಲಾಗುತ್ತದೆ. ಇದು ಪಕ್ಷಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಪೂರಕವಾಗಿ ನಿಲ್ಲುವ ದಾಖಲೆಯಾಗಿ ಬದಲಾಗುತ್ತದೆ ಜೊತೆಗೆ ನಾಗರಿಕರಿಂದ ಉತ್ತಮ ಬೆಂಬಲವೂ ದೊರಕುತ್ತಿದೆ. ಮೊತ್ತಮೊದಲಾಗಿ ಈ ವರ್ಷ ಕಾಸರಗೋಡು ಜಿಲ್ಲೆಯಲ್ಲಿ ಸರ್ವೇ ಆರಂಭಿಸಲಾಗಿದೆ.

ಕಾಸರಗೋಡು ಬಾನಾಡಿಗಳ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಕಾಸರಗೋಡು ಕಡಿಮೆ ಭೂಮಿಯನ್ನು ಹೊಂದಿದ್ದರೂ ನದಿಗಳು, ಗದ್ದೆಗಳು, ವಿಶಾಲವಾದ ಪಾರೆ ಪ್ರದೇಶ, ಹುಲ್ಲು ಗಾವಲು, ಕಾಡು ಭಾಗಗಳಿಂದ ಆವರಿಸಿ ಜೈವ ವೈವಿಧ್ಯತೆಯ ತಾಣವಾಗಿರುವುದು ಬಾನಾಡಿಗಳಿಗೆ ಪೂರಕ ವಾತಾವರಣವನ್ನು ಉಂಟುಮಾಡಿದೆ.

ಜಾಗತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಆಯ್ದ ಜಲ ಪ್ರದೇಶಗಳಲ್ಲಿ ಪಕ್ಷಿ ನಿರೀಕ್ಷಣೆ ಹಾಗೂ ದಾಖಲೀಕರಣ ನಡೆಯಲಿದೆ. ಇದಕ್ಕಾಗಿ ಕಾಸರಗೋಡಿನ ಪಕ್ಷಿ ತಜ್ಞರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಜೀವ ವೈವಿಧ್ಯತೆಯ ದೃಷ್ಟಿಯಿಂದ ನೋಡಿದರೆ ಕಾಸರಗೋಡಿನ ಹಲವು ಭಾಗಗಳು ಇನ್ನೂ ಹೊರ ಪ್ರಪಂಚಕ್ಕೆ ತೆರೆದುಕೊಳ್ಳಲಿಲ್ಲ. ಪರಿಸರ ವ್ಯವಸ್ಥೆಗಳ ಬಗ್ಗೆ ಅಧಿಕ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಪ್ರಕೃತಿ ಪ್ರಿಯರು ಹಾಗೂ ಯುವ ಜನಾಂಗ ತೊಡಗಿಸಿಕೊಳ್ಳಬೇಕು. ಇದರಿಂದ ಸಿಗುವ ಮಾಹಿತಿಗಳನ್ನು ಯಾರು ಹಂಚಿಕೊಳ್ಳುತ್ತಾರೋ ಅವರೆಲ್ಲರೂ ನಾಗರಿಕ ವಿಜ್ಞಾನದ ಭಾಗವಾಗಿರುತ್ತಾರೆ. ಇದುವೇ “ಸಿಟಿಜನ್‌ ಸೈನ್ಸ್‌’.

Advertisement

ಇಂತಹ ಪ್ರಯತ್ನಗಳು ಜಿಲ್ಲೆಯಾದ್ಯಂತ ನಡೆದಾಗ ಗದ್ದೆಗಳು ಮತ್ತು ಪಕ್ಷಿಗಳ ಸ್ಥಿತಿಗತಿಗಳ ಬಗ್ಗೆ ತಿಳಿಯಲು ನಮಗೆ ಸಾಧ್ಯವಿದೆ ಎನ್ನುತ್ತಾರೆ ಪಕ್ಷಿ ವೀಕ್ಷಕರೂ, ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸ್ಥಾಪಕ ಅಧ್ಯಕ್ಷರೂ ಆಗಿರುವ ಮ್ಯಾಕ್ಸಿಂ ರೋಡ್ರಿಗಸ್‌ ಕೊಲ್ಲಂಗಾನ, ಪಕ್ಷಿ ವೀಕ್ಷಕರಾದ ಶ್ಯಾಮ್‌ಕುಮಾರ್‌ ಪುರವಂಕರ, ಮ್ಯಾಕ್ಸಿಮ್‌ ಮತ್ತು ಜೆಶ್ಮಾ ನಾರಂಪಾಡಿ ಭಾಗವಹಿಸಿ ಪೆರಲತ್ವಾಯಲ್‌ ಮತ್ತು ಚೆಮ್ಮಟಂವಯಲ್‌ ಗದ್ದೆಗಳಲ್ಲಿ ಸರ್ವೇ ನಡೆಸಿದರು.

ಕಾಸರಗೋಡಿಗೆ ವಿಶೇಷವಾದ ಕೆಂಪು ಕಾಲು ಗೊರವ (ಸ್ಪಾಟೆಡ್‌ ರೆಡ್‌ಶ್ಯಾಂಕ್‌), ಡೇಗೆ (ಓಸ್ಪ್ರೇ) ಪಟ್ಟೆ ಬಾಲದ ಹಿನ್ನೀರ ಗೊರವ (ಬ್ಲ್ಯಾಕ್‌ -ಟೈಲ್ಡ್‌ ಗಾಡ್ವಿಟ್‌), ಬೂದು ತಲೆಯ ಟಿಟ್ಟಿಭ (ಗ್ರೇ ಹೆಡ್ಡೆಡ್‌ ಲ್ಯಾಪಿಂಗ್‌) ಮೊದಲಾದ 85 ಜಾತಿಯ ಪಕ್ಷಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿತು.

Advertisement

Udayavani is now on Telegram. Click here to join our channel and stay updated with the latest news.

Next