Advertisement

ಜಾತಿಗಣತಿ ಸಂಚಲನ: ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆಗೆ ವಿಪಕ್ಷಗಳಿಂದ ಹೆಚ್ಚಿದ ಆಗ್ರಹ

12:11 AM Oct 03, 2023 | Team Udayavani |

ಪಾಟ್ನಾ: ಮುಂದಿನ ಲೋಕಸಭೆ ಚುನಾವಣೆಗೆ ದೇಶ ಅಣಿಯಾಗುತ್ತಿರು ವಂತೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಹಾರ ಸರಕಾರವು ಬಹುನಿರೀಕ್ಷಿತ ಮತ್ತು ಬಹುವಿವಾದಿತ ಜಾತಿಗಣತಿಯ ವರದಿ ಯನ್ನು ಬಿಡುಗಡೆ ಮಾಡಿದೆ. ಈ ವರದಿ ಬಿಡುಗಡೆಯಾಗುತ್ತಲೇ “ದೇಶವ್ಯಾಪಿ ಜಾತಿ ಗಣತಿ’ ನಡೆಯಬೇಕೆಂಬ ಚರ್ಚೆ ಕಾವು ಪಡೆಯತೊಡಗಿದೆ.

Advertisement

ಬಿಹಾರದ ಒಟ್ಟು ಜನಸಂಖ್ಯೆ (13.07 ಕೋಟಿ)ಯಲ್ಲಿ ಶೇ. 3ರಷ್ಟು ಮಂದಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳು ಮತ್ತು ಅತ್ಯಂತ ಹಿಂದುಳಿದ ವರ್ಗ (ಇಬಿಸಿ)ಗಳಿಗೆ ಸೇರಿದವರು ಎಂಬ ಅಚ್ಚರಿಯ ಮಾಹಿತಿ ಯನ್ನು ಈ ವರದಿ ಬಹಿರಂಗಪಡಿಸಿದೆ. ಜಾತಿ ಆಧಾರಿತ ಸಮೀಕ್ಷೆಯ ದತ್ತಾಂಶಗಳನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಬಿಹಾರ. ಜಾತಿಗಣತಿಯ ವರದಿಯು ಬಿಹಾರದಲ್ಲಿ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಲಿದ್ದು, ಹೊಸ ಸಮೀಕರಣಕ್ಕೆ ದಾರಿ ಮಾಡಿ ಕೊಡುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

ಬಿಹಾರದ ಜಾತಿಗಣತಿ ವರದಿ ಹೊರ ಬೀಳುತ್ತಿದ್ದಂತೆಯೇ ಕರ್ನಾಟಕ ಸಹಿತ ದೇಶದ ಇತರ ರಾಜ್ಯಗಳಲ್ಲೂ ಜಾತಿಗಣತಿಯ ಕೂಗು ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಕಾಂಗ್ರೆಸ್‌, ಎಸ್‌ಪಿ ಸಹಿತ ವಿವಿಧ ವಿಪಕ್ಷಗಳು “ರಾಷ್ಟ್ರವ್ಯಾಪಿ ಜಾತಿಗಣತಿ’ ನಡೆಸಬೇಕೆಂದು ಆಗ್ರಹಿಸುತ್ತಿವೆ. ಈ ಗಣತಿಯನ್ನು ವಿರೋಧಿ ಸುತ್ತ ಬಂದಿರುವ ಆಡಳಿತಾರೂಢ ಬಿಜೆಪಿ ಯನ್ನು ಮಣಿಸಲು ಇದುವೇ ಪ್ರಮುಖ ಅಸ್ತ್ರ ಎನ್ನುವುದು ವಿಪಕ್ಷಗಳ ಲೆಕ್ಕಾಚಾರ. ಅದರಂತೆಯೇ ಕೆಲವು ತಿಂಗಳಿಂದೀಚೆಗೆ ವಿಪಕ್ಷಗಳ ಮಹಾಮೈತ್ರಿಯ ನಾಯಕರು ಒಬ್ಬೊಬ್ಬರಾಗಿಯೇ ತಮ್ಮ ಚುನಾವಣ ಪ್ರಚಾರ ಭಾಷಣಗಳಲ್ಲಿ “ಜಾತಿಗಣತಿ’ಯ ಮಂತ್ರ ಜಪಿಸುತ್ತಿದ್ದಾರೆ.

ಛತ್ತೀಸ್‌ಗಢ, ಮಧ್ಯಪ್ರದೇಶ ಸಹಿತ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಲವು ಬಾರಿ, “ಜಾತಿಗಣತಿಯು ದೇಶದ ಎಕ್ಸ್‌-ರೇ ಇದ್ದಂತೆ’ ಎಂದು ಬಣ್ಣಿಸಿ ದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಜಾತಿಗಣತಿ ನಡೆಸಿ, ಎಲ್ಲ ವರ್ಗಗಳಿಗೂ ಸಮಾನ ಸಾಮಾಜಿಕ ನ್ಯಾಯ ದೊರಕಿಸುತ್ತೇವೆ ಎಂಬ ಆಶ್ವಾಸನೆ ಯನ್ನೂ ನೀಡಿದ್ದಾರೆ. ಜಾತಿಗಣತಿಯು ಪ್ರತೀ ಜಾತಿಯ ಜನಸಂಖ್ಯೆ ಎಷ್ಟು ಎಂಬುದನ್ನು ಬಹಿರಂಗಪಡಿಸುವುದರಿಂದ ಆಡಳಿತಯಂತ್ರ, ಅಭಿವೃದ್ಧಿ ಯೋಜನೆಗಳಲ್ಲಿ ಒಬಿಸಿಗಳು, ದಲಿತರು, ಬುಡಕಟ್ಟು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಅನುಕೂಲ ವಾಗಲಿದೆ ಎಂದಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಜಾತಿಗಣತಿಗೆ ಒತ್ತಾಯಿಸುತ್ತಲೇ ಇದ್ದಾರೆ.

ಬಿಹಾರದ ನಿತೀಶ್‌ ಸರಕಾರ ನಡೆಸಿದ ಜಾತಿಗಣತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, “ಹಲವು ವರ್ಷ ಗಳಿಂದ ಬದಲಾದ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಗಳ ಬಗ್ಗೆ ಇದರಲ್ಲಿ ಮಾಹಿತಿ ಇಲ್ಲ. ಜಾತಿಗಣತಿ ನಡೆಸುವುದಕ್ಕೆ ನಾವು ಹಿಂದೆಯೇ ಸಮ್ಮತಿಸಿದ್ದೆವು. ವರದಿಯನ್ನು ಸಂಪೂರ್ಣವಾಗಿ ಅಭ್ಯಸಿಸಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇವೆ’ ಎಂದಿದೆ.

Advertisement

ಹಲವು ರಾಜ್ಯಗಳಲ್ಲಿ ಚರ್ಚೆ
ಜಾತಿಗಣತಿ ಬಹಳ ಸೂಕ್ಷ್ಮ ವಿಚಾರವಾದ ಕಾರಣ ಕೇಂದ್ರ ಹಾಗೂ ರಾಜ್ಯ ಸರಕಾರಗಳು, “ಜೇನುಗೂಡಿಗೆ ಕಲ್ಲು ಎಸೆಯುವ’ ಕೆಲಸಕ್ಕೆ ಕೈಹಾಕಿಲ್ಲ. ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಈ ಹಿಂದೆ ಹೆಜ್ಜೆ ಇರಿಸಿದ್ದರೂ ವರದಿ ಬಿಡುಗಡೆ ಮಾಡುವ ಧೈರ್ಯ ತೋರಿಲ್ಲ. ದೇಶದಲ್ಲಿ ಜಾತಿಗಣತಿಯ ವರದಿ ಬಹಿರಂಗಪಡಿಸಿದ ಮೊದಲ ರಾಜ್ಯ ಬಿಹಾರ. ಈ ಹಿಂದೆ 2014ರಲ್ಲಿ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆ ನಡೆದರೂ ವರದಿಗೆ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. 2021ರಲ್ಲಿ ತೆಲಂಗಾಣದ ಹಿಂದುಳಿದ ವರ್ಗಗಳ ಆಯೋಗವು ಇಂಥ ಗಣತಿಗೆ ಮುಂದಾಗಿತ್ತಾದರೂ ಬಳಿಕ ನನೆಗುದಿಗೆ ಬಿತ್ತು. ಒಡಿಶಾ ಸರಕಾರವು ಇತ್ತೀಚೆಗೆ ಅಂದರೆ ಮೇ 1ರಿಂದ ಜಾತಿ ಆಧರಿತ ಸಮೀಕ್ಷೆ ಕೈಗೆತ್ತಿಕೊಂಡಿದೆ.

1951ರಿಂದ ಈವರೆಗೆ ಪ್ರತೀ ಜನಗಣತಿಯ ಸಮಯದಲ್ಲೂ ಜಾತಿಗಣತಿಯ ಕೂಗು ರಾಜಕೀಯ ವಲಯದಲ್ಲಿ ಎದ್ದಿದೆ. 2021ರಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಜನಗಣತಿಯೊಂದಿಗೆ ಜಾತಿಗಣತಿ ಯನ್ನೂ ನಡೆಸುವಂತೆ ಸರಕಾರವನ್ನು ಕೋರಿಕೊಂಡಿತ್ತು. ಜೆಡಿಯು, ಆರ್‌ಜೆಡಿ, ಬಿಆರ್‌ಎಸ್‌, ಕಾಂಗ್ರೆಸ್‌ ಸಹಿತ ವಿಪಕ್ಷಗಳು ಈ ಕೋರಿಕೆಗೆ ಬೆಂಬಲ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲೂ ಜಾತಿಗಣತಿಯನ್ನು ಪ್ರಬಲವಾಗಿ ವಿರೋಧಿಸಿತ್ತು.

ಜಾತಿಗಣತಿಯನ್ನು ವಿರೋಧಿಸುತ್ತ ಬಂದಿರುವ ಬಿಜೆಪಿ ವಿರುದ್ಧ ಇದೇ ಅಸ್ತ್ರವನ್ನು ಝಳಪಿಸಿ 2024ರ ಲೋಕಸಭೆ ಚುನಾವಣೆ ಎದುರಿಸುವುದು ವಿಪಕ್ಷಗಳ ಮೈತ್ರಿಯ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ದೇಶ ವಿಭಜಿಸುವ ಯತ್ನ : ಪ್ರಧಾನಿ ಮೋದಿ
“ಜಾತಿಯ ಹೆಸರಲ್ಲಿ ದೇಶವನ್ನು ವಿಭಜಿಸಲು ವಿಪಕ್ಷಗಳು ಯತ್ನಿಸುತ್ತಿವೆ…’ ಬಿಹಾರದಲ್ಲಿ ಜಾತಿಗಣತಿ ವರದಿ ಹೊರಬಿದ್ದ ಕೆಲವೇ ತಾಸುಗಳಲ್ಲಿ ಪ್ರಧಾನಿ ಮೋದಿ ಮಾಡಿದ ಆರೋಪವಿದು. ಮಧ್ಯಪ್ರದೇಶದಲ್ಲಿ ಸೋಮವಾರ ಮಾತನಾಡಿ ವಾಗ್ಧಾಳಿ ನಡೆಸಿದರು. “ವಿಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡದೆ ಬಡವರ ಭಾವನೆಗಳೊಂದಿಗೆ ಆಟವಾಡಿದವು. ಈಗಲೂ ಅದೇ ಆಟವನ್ನು ಆಡುತ್ತಿವೆ. ಹಿಂದೆಯೂ ಜಾತಿಯ ಹೆಸರಲ್ಲಿ ದೇಶವನ್ನು ವಿಭಜಿಸಿದವು, ಈಗಲೂ ಅದನ್ನೇ ಮಾಡುತ್ತಿವೆ’ ಎಂದಿರುವ ಪ್ರಧಾನಿ ಮೋದಿ, “ಜಾತಿಯ ಹೆಸರಲ್ಲಿ ದೇಶದ ವಿಭಜನೆಯು ಮಹಾಪಾಪ’ ಎಂದು ಬಣ್ಣಿಸಿದರು.

ಜಿತ್ನಾ ಆಬಾದಿ,
ಉತ್ನಾ ಹಕ್‌’
ಬಿಹಾರ ಜಾತಿಗಣತಿ ವರದಿ ಬಿಡುಗಡೆ ಯನ್ನು ವಿಪಕ್ಷಗಳ ಮೈತ್ರಿಕೂಟ ಐಎನ್‌ಡಿಐಎ ಸ್ವಾಗತಿಸಿದೆ. “ಜಿತ್ನಾ ಆಬಾದಿ, ಉತ್ನಾ ಹಕ್‌’ (ಜನಸಂಖ್ಯೆಗೆ ಅನುಗುಣ ವಾಗಿ ಪ್ರಾತಿನಿಧ್ಯ) ಎಂಬ ಹೊಸ ಉದ್ಘೋಷದೊಂದಿಗೆ ವರದಿಗೆ ಬೆಂಬಲ ಸೂಚಿಸಿವೆ. ವರದಿ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಈ ವರದಿಯು ರಾಜ್ಯದ ಶೇ. 84ರಷ್ಟು ಮಂದಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದವರು ಎಂಬುದನ್ನು ಸಾಬೀತುಪಡಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಅವರವರ ಪಾಲು ಸೇರಬೇಕು ಎಂದಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚಿದ ಒತ್ತಡ
ಬೆಂಗಳೂರು: ಬಿಹಾರದ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಗ್ಗೆ ಕುತೂಹಲ ಇಮ್ಮಡಿಸಿದ್ದು, ಬಿಡುಗಡೆಗೆ ಆಗ್ರಹ ಕೇಳಿಬರಲಾರಂಭಿಸಿದೆ.

ಕೇವಲ ಒಂದೂವರೆ ವರ್ಷದ ಹಿಂದೆ ಬಿಹಾರ ದಲ್ಲಿ ಜಾತಿ ಸಮೀಕ್ಷೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು. ಅದನ್ನು ಪೂರ್ಣಗೊಳಿಸಿ, ಈಗ ಬಿಡುಗಡೆ ಆಗಿದೆ. ವಿಶೇಷವೆಂದರೆ ಬಿಹಾರದ ಒಂದು ತಂಡ ಕರ್ನಾಟಕಕ್ಕೆ ಭೇಟಿ ನೀಡಿ, ಇಲ್ಲಿನ ಜಾತಿಗಣತಿ ಬಗ್ಗೆ ಮಾಹಿತಿ ಪಡೆದಿತ್ತು. ಆದರೆ 8 ವರ್ಷಗಳಾದರೂ ರಾಜ್ಯದ ವರದಿ ಬಿಡುಗಡೆ ಆಗಿಲ್ಲ. ಈಚೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಆ ವರದಿಗೆ ಮರುಜೀವ ಬಂದಿದ್ದು, ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಈ ಸಂಬಂಧದ ವರದಿಯನ್ನು ಪರಿಷ್ಕರಣೆ ಮಾಡಿ ಸಲ್ಲಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆಯೋಗವು ನವೆಂಬರ್‌ ಹೊತ್ತಿಗೆ ಪರಿಷ್ಕೃತ ವರದಿ ನೀಡುವ ಗುರಿ ಹೊಂದಿದೆ.

“ನಿತೀಶ್‌ ಕುಮಾರ್‌ ಆಗಬೇಕಿದೆ’
“ಇದೆಲ್ಲವೂ ಸರಕಾರದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಲವು ಸವಾಲುಗಳು, ಸಮಸ್ಯೆಗಳನ್ನು ಎದುರಿಸಿ ಅಲ್ಪಾವಧಿಯಲ್ಲೇ ವರದಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು. ಕರ್ನಾಟಕದಲ್ಲೂ ಆ ವರದಿ ಬಿಡುಗಡೆ ಆಗಬೇಕಾದರೆ, ಇಲ್ಲಿ ಆಡಳಿತ ನಡೆಸುವವರೂ ನಿತೀಶ್‌ ಕುಮಾರ್‌ ಆಗಬೇಕಾಗುತ್ತದೆ’ ಎಂದು ಸಮೀಕ್ಷೆಯಲ್ಲಿ ಸಕ್ರಿಯರಾಗಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್‌. ಲಿಂಗಪ್ಪ ತಿಳಿಸುತ್ತಾರೆ.

ದಶಕಗಳ ಹಿನ್ನೆಲೆ
ಹಾಗೆ ನೋಡಿದರೆ, ರಾಜ್ಯದ ಜಾತಿ ಗಣತಿಗೆ ದಶಕಗಳ ಹಿನ್ನೆಲೆ ಇದೆ. 2004ರಲ್ಲಿ ಮೊದಲ ಬಾರಿಗೆ ಇದು ಪ್ರಸ್ತಾವ ಆಗಿತ್ತು. ಇದಾಗಿ ದಶಕದ ಅನಂತರ ಸಮೀಕ್ಷೆಗೆ ಚಾಲನೆ ದೊರೆಯಿತು. 2015ರ ಈ. 15ರಿಂದ ಮೇ 15ರ ಅವಧಿಯಲ್ಲಿ ನಡೆದ ಜಾತಿ ಗಣತಿ ವ್ಯಾಪ್ತಿಗೆ ರಾಜ್ಯದ ಸುಮಾರು 6 ಕೋಟಿ ಜನ ಒಳಪಟ್ಟಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳು ನೂರಕ್ಕೆ ನೂರರಷ್ಟು ಸಮೀಕ್ಷೆ ವ್ಯಾಪ್ತಿಗೆ ಬಂದಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಶೇ. 85-90ರಷ್ಟು ಜನ “ಕವರ್‌’ ಆಗಿದ್ದಾರೆ. ಸರಕಾರಿ ಸಿಬಂದಿ, ಉಪಕರಣಗಳನ್ನು ಬಳಸಿಕೊಂಡು ಮಾಡಿದ ಈ ಪ್ರಕ್ರಿಯೆಯಲ್ಲಿ 1.65 ಲಕ್ಷ ಗಣತಿದಾರರು ಕೆಲಸ ಮಾಡಿದ್ದರು. ವರದಿಯಲ್ಲಿ ಪ್ರತೀ ಕುಟುಂಬದ ಮುಖ್ಯಸ್ಥ, ಸದಸ್ಯರು, ಲಿಂಗ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಾನಮಾನ, ಪೂರ್ಣಗೊಂಡ ವಯಸ್ಸು ಹೀಗೆ ಒಟ್ಟು 55 ಅಂಶಗಳ ಮಾಹಿತಿ ಸಂಗ್ರಹಿಸಲಾಗಿದೆ.

ಸರಕಾರ ಈ ಸಮೀಕ್ಷೆಗೆ 2014-2015ರಿಂದ 2016-17ರ ವರೆಗೆ ಒಟ್ಟು 206.84 ಕೋಟಿ ರೂ. ನಿಗದಿಪಡಿಸಿ, ಅದರಲ್ಲಿ 192.79 ಕೋಟಿ ರೂ. ಬಿಡು ಗಡೆ ಮಾಡಿತ್ತು. ವರದಿ ಸಿದ್ಧಪಡಿಸಲು 158.47 ಕೋ. ರೂ. ವೆಚ್ಚ ಮಾಡಲಾಗಿದೆ. ಜಾತಿ ಗಣತಿಯ ಗಣಕೀಕರಣಕ್ಕೆ ಬಿಇಎಲ್‌ (ಭಾರತ್‌ ಅರ್ತ್‌ ಮೂವರ್ ಲಿ.,) ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ 43.09 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಸಮೀಕ್ಷೆ ಬಗ್ಗೆ ಪ್ರಬಲ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶೇಷವಾಗಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದ್ದು, ಉಳಿದ ಸಮುದಾಯಗಳು ಪ್ರಬಲವಾಗಿವೆ ಎಂದು ಬಿಂಬಿಸುವುದು, ಆ ಮೂಲಕ ಪ್ರಮುಖ ಸಮುದಾಯಗಳ ಪ್ರಾಬಲ್ಯ ಕುಂದಿಸುವ ಪ್ರಯತ್ನಗಳು ಇದರ ಹಿಂದಿವೆ ಎಂಬ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಮೀಕ್ಷೆ ಸ್ಥಗಿತಕ್ಕೆ ಆಗ ಒತ್ತಾಯ ತೀವ್ರವಾಗಿತ್ತು. ಈ ನಡುವೆ ವರದಿ ಬಗ್ಗೆ ಮತ್ತೂಂದು ಅಪಸ್ವರದ ಅಲೆ ಎದ್ದಿತ್ತು. ವರದಿಯಲ್ಲಿರುವ ಹಲವು ಅಂಶಗಳು “ಸೋರಿಕೆ’ ಆಗಿವೆ ಎಂಬುದು ಗಂಭೀರ ಆರೋಪ ಆಗಿತ್ತು. ಇನ್ನು ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಸಮೀಕ್ಷೆ ಬಳಿಕ 500 ಜಾತಿಗಳು ಹೊಸದಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ.

ರಾಜ್ಯದ ವರದಿ ಸ್ಥಿತಿಗತಿ
ರಾಜ್ಯದಲ್ಲಿ ತಲಾ ಸಾವಿರ ಪುಟಗಳಿರುವ 20 ಸಂಪುಟಗಳಲ್ಲಿ ಸಿದ್ಧಗೊಂಡ ಈ ವರದಿಯು ಪ್ರಸ್ತುತ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಬಳಿ ಇದೆ. ಅದರಲ್ಲಿರುವ ಸಂಖ್ಯೆ ಗಳನ್ನು ಆಧರಿಸಿ ವಿವಿಧ ಸಮುದಾಯಗಳ ಉದ್ಯೋಗ, ಶೈಕ್ಷಣಿಕ ಗುಣಮಟ್ಟವನ್ನು ಅಧ್ಯಯನ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಹಲವು ಶಿಫಾರಸುಗಳೊಂದಿಗೆ ವೈಜ್ಞಾನಿಕ ವರದಿಯನ್ನು ಒಪ್ಪಿಸಲು ಸಿದ್ಧತೆ ನಡೆದಿದೆ. “ನವೆಂಬರ್‌ ವೇಳೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸಿದ್ಧಗೊಳಿಸಿ, ಸರಕಾರಕ್ಕೆ ಸಲ್ಲಿಸಲಾಗುವುದು. ಅನಂತರ ವರದಿಯನ್ನು ಸರಕಾರ ಬಿಡುಗಡೆ ಮಾಡಲಿದೆ’ ಎಂದು ಆಯೋಗದ ಅಧ್ಯಕ್ಷ ಜಯ ಪ್ರಕಾಶ ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next