ಉಡುಪಿ: ಜನಗಣತಿ ಅಂಗವಾಗಿ ಜಿಲ್ಲೆಯಲ್ಲಿ ಎ. 15ರಿಂದ ಮೇ 29ರ ವರೆಗೆ ಮನೆಗಳ ಗಣತಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಗುರುವಾರ ತಮ್ಮ ಕಚೇರಿ ಯಲ್ಲಿ ನಡೆದ ಜನಗಣತಿ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ಗಣತಿ ಅಧಿಕಾರಿಗಳು ಮುದ್ರಿತ ಪೇಪರ್ ಮತ್ತು ಮೊಬೈಲ್ ಆ್ಯಪ್ಲಿಕೇಶನ್ – ಎರಡು ರೀತಿ ಗಣತಿ ನಡೆಸಲಿದ್ದಾರೆ. ಮೊಬೈಲ್ ಆ್ಯಪ್ಲಿಕೇಶನ್‌ನಲ್ಲಿ ದಾಖಲಿಸುವುದರಿಂದ ವಿವರಗಳು ಶೀಘ್ರವಾಗಿ ದೊರೆಯಲಿವೆ. ಇದರ ಆಯ್ಕೆ ಗಣತಿ ಅಧಿಕಾರಿಗಳಿಗೆ ನೀಡಲಾಗಿದ್ದು, ಒಬ್ಬ ಗಣತಿದಾರರು ಪ್ರತಿ ದಿನ 150ರಿಂದ 180 ಮನೆಗಳ 650 ರಿಂದ 800 ಗಣತಿ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಮಾಸ್ಟರ್ ಟ್ರೈನರ್ ಗಳಿಗೆ ತರಬೇತಿ ನೀಡಲಾಗಿದೆ ಎಂದರು.
ನಾಗರಿಕರಿಂದ ಪಡೆಯುವ ಮಾಹಿತಿಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳ ಲಾಗುವುದು. ಗಣತಿ ಸಂದರ್ಭ ನಾಗರಿಕರಿಂದ ಯಾವುದೇ ದಾಖಲೆ ಅಥವಾ ಪ್ರಮಾಣಪತ್ರಗಳನ್ನು ಪಡೆಯಲಾಗುವುದಿಲ್ಲ ಮತ್ತು ಬಯೋಮೆಟ್ರಿಕ್ ಸಂಗ್ರಹ ಕೂಡ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಜನಗಣತಿ ಕುರಿತ ಜಿಲ್ಲಾ ನೋಡೆಲ್ ಅಧಿಕಾರಿ ಪ್ರಮೇಶ್ ಚಂದ್ರ ಬಾಬು ಮಾತನಾಡಿ, ದೇಶದಲ್ಲಿ 1872ರಿಂದ ಜನಗಣತಿ ಆರಂಭಗೊಂಡಿದ್ದು, ಪ್ರಸ್ತುತ 2021ರ ಜನಗಣತಿಯು ದೇಶದ 16ನೆಯ ಮತ್ತು ಸ್ವಾತಂತ್ರ್ಯಾನಂತರದ 8ನೇ ಜನಗಣತಿ. ಭಾರತದ ಜನಗಣತಿ ವಿಶ್ವದ ಅತ್ಯುತ್ತಮ ಜನಗಣತಿ ವಿಧಾನ ಎಂದು ಪರಿಗಣಿತವಾಗಿದೆ ಎಂದರು.
ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನ್ಕರ್, ಡಿಡಿಪಿಐ ಶೇಷಶಯನ ಕಾರಿಂಜ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.