Advertisement

ಹೀಗಿರಲಿದೆ ಈ ಬಾರಿಯ ಜನಗಣತಿ ; ನೀವು ನೀಡಬೇಕಾದ ವಿವರಗಳು ಹೀಗಿವೆ

10:03 AM Jan 17, 2020 | Hari Prasad |

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (NPR) ಸಹಿತವಾಗಿರುವ ಈ ಬಾರಿಯ ಜನಗಣತಿಯ ಸಂದರ್ಭದಲ್ಲಿ ನಾಗರಿಕರು ಯಾವುದೇ ರೀತಿಯ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ಸ್ಪಷ್ಟಪಡಿಸಿದೆ.

Advertisement

ಎನ್.ಪಿ.ಆರ್. ಸಂದರ್ಭದಲ್ಲಿ ಜನಗಣತಿದಾರರು ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಆದರೆ ಜನರು ಪರಿಶೀಲನೆಯ ಉದ್ದೇಶದಿಂದ ತಮ್ಮಲ್ಲಿರುವ ದಾಖಲೆಗಳನ್ನು ಗಣತಿ ಅಧಿಕಾರಿಗಳಿಗೆ ತೋರಿಸಲು ಬಯಸಿದರೆ ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಗೃಹ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಪ್ರಥಮ ಹಂತ ಇದೇ ಎಪ್ರಿಲ್ 01 ರಿಂದ ಸೆಪ್ಟಂಬರ್ 30ರವರೆಗೆ ನಡೆಯಲಿದೆ. ಈ ಹಂತದಲ್ಲಿ ಮನೆ ಒಡೆತನಕ್ಕೆ ಸಂಬಂಧಿಸಿದ ವಿವರಗಳನ್ನು ಗಣತಿದಾರರು ಸಂಗ್ರಹಿಸಲಿದ್ದಾರೆ. ಇದರಲ್ಲಿ, ಮನೆಯ ಮುಖ್ಯಸ್ಥರು ಯಾರು, ಮನೆಯಲ್ಲಿ ಎಷ್ಟು ಜನರಿದ್ದಾರೆ? ಯಾವೆಲ್ಲಾ ಸೌಲಭ್ಯಗಳು ಮನೆಯಲ್ಲಿ ಇವೆ? ಶೌಚಾಲಯವಿದೆಯೇ? ಮೊಬೈಲ್ ನಂಬರ್ ಕುರಿತಾದ ಮಾಹಿತಿ, ಮನೆಯ ಸದಸ್ಯರಲ್ಲಿ ಎಷ್ಟು ವಾಹನಗಳಿವೆ…? ಎಂಬೆಲ್ಲಾ ವಿವರಗಳನ್ನು ಈ ಸಂದರ್ಭದಲ್ಲಿ ಗಣತಿದಾರರು ಸಂಗ್ರಹಿಸಲಿದ್ದಾರೆ.

ಇನ್ನು 2021ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿರುವ ಜನಗಣತಿಯ ಎರಡನೇ ಹಂತದಲ್ಲಿ ಕೇಳಲಾಗುವ ಹೆಚ್ಚಿನ ಪ್ರಶ್ನೆಗಳು ವ್ಯಕ್ತಿ ಕೇಂದ್ರಿತವಾಗಿರುತ್ತವೆ. ಉದಾಹರಣೆಗೆ, ‘ಮನೆಯಲ್ಲಿ ಎಷ್ಟು ಜನರಿದ್ದಾರೆ?’ ಎಂಬ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ದೇಶದ ಒಟ್ಟಾರೆ ಜನಸಂಖ್ಯೆಯನ್ನು ಲೆಕ್ಕಾಚಾರ ಮಾಡಲು ಸಹಕಾರಿಯಾಗಲಿದೆ.

ದುರ್ಗಮ ಪ್ರದೇಶಗಳಲ್ಲಿ ಜನಗಣತಿ ನಡೆಸಲು ಹೋಗುವ ಅಧಿಕಾರಿಗಳನ್ನು ಹೆಲಿಕಾಫ್ಟರ್ ಮೂಲಕ ಕರೆದೊಯ್ಯಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. 2011ರ ಜನಗಣತಿ ಸಂದರ್ಭದಲ್ಲೂ ದುರ್ಗಮ ಪ್ರದೇಶಗಳಲ್ಲಿ ಜನಗಣತಿ ಕಾರ್ಯಕ್ಕಾಗಿ ಹೆಲಿಕಾಫ್ಟರ್ ಗಳನ್ನು ಬಳಸಲಾಗಿತ್ತಾದರೂ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಇವುಗಳ ಸೇವೆಯನ್ನು ಬಳಸಿಕೊಳ್ಳುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.

Advertisement

ಇನ್ನೂ ವಿಶೇಷವೆಂದರೆ ಈ ಬಾರಿಯ ಜನಗಣತಿ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲೇ ನಡೆಯಲಿದೆ. ಇದಕ್ಕಾಗಿ ಸರಕಾರವು ವಿಶೇಷ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು ಇದನ್ನು ಜನಗಣತಿ ಅಧಿಕಾರಿಗಳು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಈ ಅ್ಯಪ್ ಮೂಲಕವೇ ತಾವು ಪಡೆದುಕೊಳ್ಳುವ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಲೆಕ್ಕಾಚಾರ ಮಾಡಲು ಸಾಧ್ಯವಾಗಲಿದೆ.ಇದಕ್ಕಾಗಿ ಜನಗಣತಿಯಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ನಾಲ್ಕು ಹಂತಗಳಲ್ಲಿ ತರಬೇತಿಯನ್ನೂ ಸಹ ನೀಡಲಾಗುವುದು.

ಮೊದಲನೇ ಹಂತದ ಜನಗಣತಿಗಾಗಿ ಒಟ್ಟು 30 ಲಕ್ಷ ಉದ್ಯೋಗಿಗಳನ್ನು ನಿಯೋಜಿಸಲಾಗುವುದು. ಕಳೆದ ಜನಗಣತಿ ಸಂದರ್ಭದಲ್ಲಿ ಇವರಿಗೆ ಭತ್ಯೆ ರೂಪದಲ್ಲಿ 5,500 ರೂಪಾಯಿಗಳನ್ನು ನೀಡಲಾಗಿತ್ತು. ಈ ಬಾರಿ ಗಣತಿದಾರಿಗೆ ಮನೆಗಳ ಪಟ್ಟಿ ಮಾಡುವಿಕೆ, ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ದಾಖಲಾತಿಗಳ ಮಾಹಿತಿ ಸಂಗ್ರಹಿಸಬೇಕಾಗಿರುವ ಕಾರಣದಿಂದ ಅವರ ಗಣತಿ ಭತ್ಯೆಯನ್ನು 25 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ.

ಎನ್.ಪಿ.ಆರ್. ಮತ್ತು ಜನಗಣತಿಗಳಿಗೆ ಪ್ರತ್ಯೇಕ ಫಾರ್ಮ್ ಗಳಿರುತ್ತವೆ. ಮೊದಲನೇ ಹಂತದ ಜನಗಣತಿ ಮತ್ತು ಎನ್.ಪಿ.ಆರ್.ನಲ್ಲಿ ಕುಟುಂಬಗಳು ತಾವು ನೀಡಿದ ಮಾಹಿತಿಯನ್ನು ಖಚಿತ ಪಡಿಸಬೇಕಾಗಿರುತ್ತದೆ. ಎನ್.ಪಿ.ಆರ್.ನಲ್ಲಿ ಯಾವುದೇ ಬಯೋಮೆಟ್ರಿಕ್ ದಾಖಲೆಗಳನ್ನು ಹಾಗೂ ದಾಖಲೆಯ ಕಾಗದ ಪ್ರತಿಗಳನ್ನು ಕೇಳಲಾಗುವುದಿಲ್ಲ. ಆದರೆ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನೀವು ಸರಿಯಾದ ಮಾಹಿತಿಯನ್ನು ನೀಡಬೇಕಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next