Advertisement

ತೆಲಂಗಾಣ ನೂತನ ಅಸೆಂಬ್ಲಿಗೆ ಶಂಕುಸ್ಥಾಪನೆ

02:23 AM Jun 27, 2019 | Team Udayavani |

ಹೈದರಾಬಾದ್‌: ತೆಲಂಗಾಣ ಸರಕಾರ ವಿಧಾನ ಮಂಡಲ ಕಲಾಪಗಳಿಗಾಗಿ ಹಾಗೂ ಸರಕಾರದ ಸಚಿವಾಲಯಗಳಿಗಾಗಿ ಎರಡು ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಲು ತೀರ್ಮಾನಿಸಿದ್ದು, ಗುರುವಾರ ಶಂಕುಸ್ಥಾಪನೆ ನೆರವೇರಲಿದೆ. ಬುಧವಾರವಷ್ಟೇ ಸಂಪುಟ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ. 500 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 6-7 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಈ ಕಟ್ಟಡಗಳು ತಲೆ ಎತ್ತಲಿವೆ. ಆದರೆ, ಈ ಯೋಜನೆ ವಿರುದ್ಧ ತಕರಾರುಗಳು ಎದ್ದಿದ್ದು ಈ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದೆ.

ವಿರೋಧ ಏಕೆ?

ಪಾರಂಪರಿಕ ಕಟ್ಟಡಗಳು ನೆಲಸಮವಾಗಲಿದೆ. ನಿಜಾಮರ ಆಡಳಿತಕ್ಕೆ ಸಾಕ್ಷಿಯಾಗಿರುವ ಕಟ್ಟಡಗಳನ್ನು ಕೆಡವುವ ಬದಲು, ಅವುಗಳನ್ನೇ ಪುನರುತ್ಥಾನಗೊಳಿಸಿ, ನವೀಕರಣ ಮಾಡಿದರೆ ಸಾಕು ಎಂದು ಆಗ್ರಹಿಸಲಾಗಿದೆ. ಹೊಸ ಕಟ್ಟಡಗಳಿಗೆ ಮೀಸಲಿಟ್ಟಿರುವ 500 ಕೋಟಿ ರೂ.ಗಳಲ್ಲಿ ನಾಲ್ಕನೇ ಒಂದು ಭಾಗ ಖರ್ಚು ಮಾಡಿದರೂ ಸಾಕು, ಐತಿಹಾಸಿಕ ಕಟ್ಟಡಗಳ ಪುನರುತ್ಥಾನ, ನವೀಕರಣ ಸಾಧ್ಯ ಎಂಬುದು ವಿರೋಧಿಗಳ ವಾದವಾಗಿದೆ.

ಏನಿದು ಯೋಜನೆ?

ಸದ್ಯಕ್ಕೆ ಕಲಾಪಗಳು ನಡೆಯುವ ಎರ್ರಂ ಮಂಜಿಲ್ ಎಂಬ ಹೈದರಾಬಾದ್‌ ನಿಜಾಮರ ಕಾಲದ ಬೃಹತ್‌ ಕಟ್ಟಡವನ್ನೇ ಕೆಡವಿ ಅಲ್ಲಿ ಕಲಾಪ ಸಭಾಂಗಣಗಳನ್ನು ಕಟ್ಟಲು ತೀರ್ಮಾನಿಸಲಾಗಿದೆ. ಇನ್ನು, ಹೈದರಾಬಾದ್‌ನ ಹುಸೇನ್‌ ನಗರದಲ್ಲಿನ ಬಿಸನ್‌ ಪೋಲೋ ಜಿಮ್‌ಖಾನಾ ಮೈದಾನದಲ್ಲಿ ಸಚಿವಾಲಯಗಳ ಕಚೇರಿಗಳಿಗಾಗಿ ಮತ್ತೂಂದು ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ಕೋರ್ಟ್‌ ಕೇಸ್‌

ಈ ಹಿಂದೆ ಕೆಸಿಆರ್‌, ವಾಸ್ತು ದೋಷ ಮುಂದಿಟ್ಟುಕೊಂಡು ಹೊಸ ಕಟ್ಟಡ ಕಟ್ಟಲು ಹೊರಟಿದ್ದಾರೆಂದು ಆರೋಪಿಸಿ, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ. ಆದರೆ, ಗುರುವಾರ ಬೆಳಗ್ಗೆಯೇ ಎರ್ರಂ ಮಂಜಿಲ್ನ ಮುಂಭಾಗದಲ್ಲಿ ಹೊಸ ಕಟ್ಟಡಕ್ಕೆ ಸಿಎಂ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಎರ್ರಂ ಮಂಜಿಲ್ನ ಈಶಾನ್ಯ ಮೂಲೆಯಲ್ಲಿ ಗುಂಡಿ ತೋಡಲಾಗಿದೆ.
Advertisement

500ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕಟ್ಟಡಗಳು
6-7ಲಕ್ಷ ಚದರಡಿ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಕಟ್ಟಡಗಳು
ಕಲಾಪಗಳಿಗಾಗಿ, ಸಚಿವಾಲಯಗಳಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲು ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next