Advertisement

ಸೆನ್ಸಾರ್‌ನವರು ನಮ್ಮ ಸೇವಕರು: ನವರಸನ್‌

07:00 PM Sep 28, 2017 | Team Udayavani |

ನವರಸನ್‌ ಮೊದಲ ಬಾರಿಗೆ ನಿರ್ದೇಶಿಸಿರುವ ಮತ್ತು ನಾಯಕನಾಗಿ ಕಾಣಿಸಿಕೊಂಡಿರುವ “ವೈರ’ ಚಿತ್ರವು ಮುಂದಿನ ಶುಕ್ರವಾರ (ಅಕ್ಟೋಬರ್‌ 5) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಸೆನ್ಸಾರ್‌ ಮಂಡಳಿಯಿಂದ ಆದ ಅನುಭವಗಳ ಬಗ್ಗೆ ನವರಸನ್‌ ಕಿಡಿಕಾರಿದ್ದಾರೆ. ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೆನ್ಸಾರ್‌ ಮಂಡಳಿಯವರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು, “ನಮ್ಮ ಸಿನಿಮಾದಲ್ಲಿ ನಾಯಕಿ ಬೆನ್ನು ತೋರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ “ಎ’ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ನನಗಿರುವುದು ಒಂದೇ ಪ್ರಶ್ನೆ, ನಾವು ಸಿನಿಮಾ ಮಾಡಬೇಕಾಗಿರುವುದು ಸೆನ್ಸಾರ್‌ ಮಂಡಳಿಗಾ ಅಥವಾ ಪ್ರೇಕ್ಷಕರಿಗಾ ಎಂದರು. ಆ ದೃಶ್ಯ ಚಿತ್ರಕ್ಕೆ ಅವಶ್ಯಕತೆ ಇತ್ತು. ಅದರ ಹಿಂದೆ ಒಂದು ಮೆಸೇಜ್‌ ಸಹ ಇದೆ. ಅದನ್ನು ಸೆನ್ಸಾರ್‌ ಮಂಡಳಿಯವರು ಸಹ ಒಪ್ಪಿದ್ದಾರೆ. ಆದರೂ ನಮಗೆ “ಎ’ ಪ್ರಮಾಣಪತ್ರ ಕೊಟ್ಟಿದ್ದಾರೆ.

ಅದು ತಪ್ಪು ಎನ್ನುವುದಾದರೆ, ಒಂದು ಚಿತ್ರ ಹೇಗೆ ಮಾಡಬೇಕು ಎಂದು ಅವರೇ ಹೇಳಲಿ ಅಥವಾ ಅವರೇ ಸ್ಕ್ರಿಪ್ಟ್ ಕೊಡಲಿ. ನಮ್ಮ ಸಿನಿಮಾಗೆ ಕೊಟ್ಟರು ಸರಿ. “ಬಾಹುಬಲಿ’ ಚಿತ್ರದಲ್ಲೂ ಅಂಥದ್ದೊಂದು ದೃಶ್ಯ ಇದೆ. ಅಲ್ಲಿ ಯಾಕೆ ಕೊಟ್ಟಿಲ್ಲ. ನಾವೇನು ಮುಠಾuಳರಾ? ಅಶ್ಲೀಲತೆ ಇದ್ದರೆ ಕೊಡಲಿ. ಬೆನ್ನು ತೋರಿಸಿದರು ಎಂಬ ಕಾರಣಕ್ಕೆ ಕೊಡುವುದು ಸರಿಯಲ್ಲ. ಇದು ಬರೀ ನನ್ನ ಚಿತ್ರದ ಸಮಸ್ಯೆ ಅಲ್ಲ. “ಉಪೇಂದ್ರ ಮತ್ತೆ ಬಾ’ ಚಿತ್ರಕ್ಕೆ “ಎ’ ಸಿಕ್ಕಿದೆ.

“ಮಂತ್ರಂ’ ಎಂಬ ಚಿತ್ರಕ್ಕೂ “ಎ’ ಸಿಕ್ಕಿದೆ. ಅಷ್ಟೇ ಅಲ್ಲ, ಇತ್ತೀಚೆಗೆ “ದಯವಿಟ್ಟು ಗಮನಿಸಿ’ ಚಿತ್ರತಂಡದವರನ್ನು ಸೆನ್ಸಾರ್‌ ಮಂಡಳಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ನಮ್ಮ ಚಿತ್ರದಲ್ಲಿ ಮೋದಿ ಎಂಬ ಹೆಸರು ಇತ್ತು. ಅದನ್ನು ತೆಗೆದುಹಾಕಲು ಹೇಳಿದರು. “ಜೈ ಲವ ಕುಶ’ ಚಿತ್ರ ಪೂರ್ತಿ ಮೋದಿ ಎಂಬ ಹೆಸರು ಇದೆ. ಸೆನ್ಸಾರ್‌ ನಿಯಮಗಳು ಇಡೀ ದೇಶಕ್ಕೆ ಅನ್ವಯಿಸುವುದಾರೆ, ಬೇರೆ ರಾಜ್ಯಗಳಿಗೆ ಒಂದು ತರಹ, ನಮಗೆ ಮಾತ್ರ ಒಂದು ತರಹ ಯಾಕೆ’ ಎಂದು ಪ್ರಶ್ನಿಸುತ್ತಾರೆ ನವರಸನ್‌.

ಸೆನ್ಸಾರ್‌ನವರು ನಮ್ಮ ಸೇವಕರು ಎನ್ನುವ ಅವರು, “ಸೆನ್ಸಾರ್‌ನವರು ಸುಮ್ಮನೆ ಚಿತ್ರ ನೋಡುವುದಿಲ್ಲ. ಒಂದು ಚಿತ್ರ ನೋಡುವುದಕ್ಕೆ 30 ಸಾವಿರ ಡಿಡಿ ಕಟ್ಟಬೇಕು. ಎಸಿ ಚಿತ್ರಮಂದಿರದಲ್ಲಿ ಚಿತ್ರ ತೋರಿಸಬೇಕು. ಇಷ್ಟೆಲ್ಲಾ ಮಾಡಿರುತ್ತೇವೆ. ಅವರ ಕೆಲಸವೇ ಚಿತ್ರ ನೋಡಿ ಸೆನ್ಸಾರ್‌ ಮಾಡುವುದು. ಅವರು ನಮ್ಮ ಸೇವಕರು. ನಮ್ಮ ಮೇಲೆ ಅಧಿಕಾರ ಚಲಾಯಿಸಬಾರದು. ಸುಮ್ಮನೆ ಕಾರಣವಿಲ್ಲದೆ “ಎ’ ಪ್ರಮಾಣ ಪತ್ರ ಕೊಡುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತದೆ.

Advertisement

ಮೊದಲೇ ಕನ್ನಡ ಚಿತ್ರಗಳನ್ನು ನೋಡುವವರು ಕಡಿಮೆ. “ಎ’ ಅಂದರೆ ಇನ್ನೂ ಹೆದರುತ್ತಾರೆ. ಇದರ ಹಿಂದೆ ಯಾರಧ್ದೋ ದೊಡ್ಡ ಕೈವಾಡ ಇದೆ. ಅದನ್ನು ಪತ್ತೆ ಮಾಡುತ್ತಿದ್ದೀನಿ. ನಾನು “ಎ’ ಕೊಡಬೇಡಿ ಎಂದು ಹೇಳುತ್ತಿಲ್ಲ. ನೋಡಿಕೊಂಡು ಕೊಡಿ ಅಂತಷ್ಟೇ ಹೇಳಿ. ಮೊದಲು ನಮ್ಮ ಚಿತ್ರದಲ್ಲಿ ಸಾಕಷ್ಟು ಗ್ಲಾಮರಸ್‌ ದೃಶ್ಯಗಳಿದ್ದವು. ಒಂದು ಲಿಪ್‌ಲಾಕ್‌ ಸೀನ್‌ ಇತ್ತು. ನಿರ್ಮಾಪಕರು ಅದೆಲ್ಲವನ್ನೂ ಕಿತ್ತು ಹಾಕುವುದಕ್ಕೆ ಹೇಳಿದರು.

ಎಲ್ಲಾ ಕಿತ್ತು ಹಾಕಿದ್ದೆ. ಆದರೂ “ಎ’ ಕೊಟ್ಟರು. ಇದರ ಬಗ್ಗೆ ಸೆನ್ಸಾರ್‌ ಅಧಿಕಾರಿ ಶ್ರೀನಿವಾಸಪ್ಪ ಅವರನ್ನು ಕೇಳಿದರೆ, ಅವರಲ್ಲಿ ಉತ್ತರವೇ ಇಲ್ಲ. ಈ ವಿಷಯವನ್ನು ಇಷ್ಟಕ್ಕೇ ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೀನಿ. ಬರೀ ನನ್ನ ಸಿನಿಮಾ ಅಂತ ಮಾಡುವುದಿಲ್ಲ. ಬೇರೆ ಯಾವ ನಿರ್ಮಾಪಕರ ಚಿತ್ರಕ್ಕೆ ಸೆನ್ಸಾರ್‌ ಸಮಸ್ಯೆಯಾದರೆ ಖಂಡಿತಾ ನಾನೂ ಹೋರಾಟ ಮಾಡುತ್ತೀನಿ’ ಎನ್ನುತ್ತಾರೆ ನವರಸನ್‌.

Advertisement

Udayavani is now on Telegram. Click here to join our channel and stay updated with the latest news.

Next