ನವದೆಹಲಿ: ಪ್ರಿಪೇಯ್ಡ್ ಪ್ಲ್ಯಾನ್ ಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಏರ್ ಟೆಲ್ ಗ್ರಾಹಕರಿಗೆ ಶಾಕ್ ನೀಡಿದ್ದ ಬೆನ್ನಲ್ಲೇ ವೋಡಾಫೋನ್ ಐಡಿಯಾ (ವಿಐಎಲ್) ಕೂಡಾ ಪ್ರಿಪೇಯ್ಡ್ ಟಾರಿಫ್ ನಲ್ಲಿ ಶೇ.25ರಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ಮಂಗಳವಾರ(ನವೆಂಬರ್ 23) ಘೋಷಿಸಿದೆ.
ನವೆಂಬರ್ 25ರಿಂದ ವೋಡಾಫೊನ್ ಐಡಿಯಾ ಗ್ರಾಹಕರಿಗೆ ಪ್ರಿಪೇಯ್ಡ್ ಬೆಲೆ ದುಬಾರಿಯಾಗಲಿದೆ. ಬೆಲೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಟೆಲಿಕಾಂ ಇಂಡಸ್ಟ್ರೀಗೆ ನೆರವಾಗಲಿದೆ ಎಂದು ವೋಡಾಫೋನ್ ಐಡಿಯಾ ಬಿಡುಗಡೆ ಮಾಡಿರುವ ಸಂದೇಶದಲ್ಲಿ ತಿಳಿಸಿದೆ.
ಪ್ರಸ್ತುತ ವೋಡಾಫೋನ್-ಐಡಿಯಾ ಪ್ರಿಪೇಯ್ಡ್ ಪ್ಲ್ಯಾನ್ 79 ರೂಪಾಯಿಂದ ಆರಂಭವಾಗಲಿದ್ದು, ಗುರುವಾರದಿಂದ ಇದು 99 ರೂಪಾಯಿಗೆ ಏರಿಕೆಯಾಗಲಿದೆ. 149 ರೂಪಾಯಿ ಪ್ಲ್ಯಾನ್ 179 ರೂಪಾಯಿಗೆ ಹೆಚ್ಚಳ, 1,498 ರೂಪಾಯಿಯ ಪ್ಲ್ಯಾನ್ 1,799 ರೂ.ಗೆ ಏರಿಕೆ. 2,399 ರೂ. ಪ್ಲ್ಯಾನ್ 2,899 ರೂಪಾಯಿಗೆ ಏರಿಕೆಯಾಗಿದೆ.
ವೋಡಾಫೋನ್ ಡಾಟಾ ಟಾಪ್ ಅಪ್ಸ್ 48ರೂಪಾಯಿಂದ 58 ರೂ.ಗೆ ಹೆಚ್ಚಳ, 98 ರೂಪಾಯಿಂದ 118 ರೂಪಾಯಿಗೆ, 251 ರೂಪಾಯಿ ಟಾಪ್ ಅಪ್ಸ್ ರಿಚಾರ್ಜ್ 298 ರೂಪಾಯಿಗೆ ಹೆಚ್ಚಳ ಹಾಗೂ 351 ರೂಪಾಯಿಯದ್ದು 418 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ ಟೆಲ್ ಸೋಮವಾರವಷ್ಟೇ ದರ ಹೆಚ್ಚಳ ಮಾಡಿತ್ತು. ಇದೀಗ ವೋಡಾಫೋನ್ ಕೂಡಾ ತನ್ನ ಟಾರಿಫ್ ನ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಏರ್ ಟೆಲ್ ನ ನೂತನ ಹೊಸ ದರಗಳು ನವೆಂಬರ್ 26ರಿಂದ ಜಾರಿಯಾಗಲಿದೆ.