ಸಿಲಿಯಾಕ್ ಕಾಯಿಲೆ ಎಂಬುದು ಒಂದು ಜೀವನಪರ್ಯಂತ ಇರುವ ಆರೋಗ್ಯ ಸಮಸ್ಯೆ. ಇಲ್ಲಿ ಗ್ಲುಟೆನ್ ಅಜೀರ್ಣದಿಂದಾಗಿ ಕರುಳುಗಳಿಗೆ ಹಾನಿಯುಂಟಾಗುತ್ತದೆ. ಸಾಮಾನ್ಯವಾಗಿ ಇದನ್ನು ಒಂದು ಅಲರ್ಜಿ ಎಂದು ಭಾವಿಸಲಾಗುತ್ತದೆ. ಆದರೆ ನಿಜವಾಗಿಯೂ ಇದು ಒಂದು ಅಟೊಇಮ್ಯೂನ್ ಕಾಯಿಲೆಯಾಗಿದ್ದು, ಆಹಾರದಿಂದ ಪ್ರಚೋದನೆಗೊಳ್ಳುತ್ತದೆ.
ಗ್ಲುಟೆನ್ ಆಗಿಬರದೆ ಇರುವ ಇನ್ನೂ ಎರಡು ಆರೋಗ್ಯ ಸಮಸ್ಯೆಗಳಿವೆ. ಒಂದು ಐಜಿಇಯಿಂದಾಗುವ ಗೋಧಿಯ ಅಲರ್ಜಿ ಆಗಿದ್ದರೆ ಇನ್ನೊಂದು ನಾನ್ ಸಿಲಿಯಾಕ್ ಗ್ಲುಟೆನ್ ಸೂಕ್ಷ್ಮ ಪ್ರತಿಸ್ಪಂದನೆಯಾಗಿದೆ. ಈ ಅನಾರೋಗ್ಯ ಸ್ಥಿತಿಯಲ್ಲಿ ಸಣ್ಣ ಪ್ರಮಾಣದ ಗ್ಲುಟೆನ್ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತಿದ್ದು, ಅಲ್ಪಕಾಲಿಕ ಅಥವಾ ದೀರ್ಘಕಾಲಿಕ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಧಾನ್ಯಗಳಲ್ಲಿರುವ ಇಮ್ಯುನೊಜೆನಿಕ್ ವಸ್ತುವಿನ ಸೇವನೆಯನ್ನು ವರ್ಜಿಸುವುದು ಅಂದರೆ ಗೋಧಿ, ರೈ, ಬಾರ್ಲಿ ಮತ್ತು ಓಟ್ಸ್‌ಗಳಲ್ಲಿ ಇರುವ ಗ್ಲುಟೆನ್ (ಧಾನ್ಯದಲ್ಲಿ ಕಂಡುಬರುವ ಪ್ರೊಟೀನ್) ವರ್ಜಿಸುವುದು ಈ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಆಹಾರ ಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಕ್ರಮ. ಆಹಾರವಸ್ತುಗಳ ಲೇಬಲ್‌ಗಳನ್ನು ಸರಿಯಾಗಿ ಓದುವುದು ಮತ್ತು ಸಣ್ಣ, ಹುದುಗಿಕೊಂಡ ಸ್ಥಿತಿಯಲ್ಲಿ ಗ್ಲುಟೆನ್ ಇರುವ ಆಹಾರಗಳನ್ನು ಕೂಡ ದೂರವಿಡುವುದು ಈ ಅನಾರೋಗ್ಯವನ್ನು ನಿಭಾಯಿಸುವಲ್ಲಿ ಅನಿವಾರ್ಯ ಕ್ರಮ.
ಸೋಯಾಸಾಸ್, ಮಾಲ್ಟ್ ವಿನೆಗರ್, ಉಪಾಹಾರ ಸೀರಿಯಲ್‌ಗಳು, ಹಿಂಗಿನಂತಹ ಸಂಬಾರ ಪದಾರ್ಥಗಳು, ಪ್ಯಾಕೇಜ್ ಮಾಡಲಾದ ಸೂಪ್‌ಗ್ಳು ಮತ್ತು ಗ್ರೇವಿಗಳಲ್ಲಿ ಕೂಡ ಸಣ್ಣ ಪ್ರಮಾಣದಲ್ಲಿ ಗ್ಲುಟೆನ್ ಇರಬಹುದಾಗಿದ್ದು, ಎಚ್ಚರಿಕೆ ಅಗತ್ಯ.
ಸಿಲಿಯಾಕ್ ರೋಗಿಗೆ ರೋಗ ಪತ್ತೆಯಾಗುವ ಹಂತದಲ್ಲಿ ಫೋಲಿಕ್ ಆ್ಯಸಿಡ್, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ವಿಟಮಿನ್ ಬಿ12 ಪೂರಕ ಆಹಾರದ ಅಗತ್ಯವಿರುತ್ತದೆ. ದೀರ್ಘಕಾಲಿಕ ಪಥ್ಯಾಹಾರದ ಸಂದರ್ಭದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆಗಳನ್ನು ಶಿಫಾರಸು ಮಾಡಲಾಗುತ್ತದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪ್ರತೀ ಕೆ.ಜಿ. ಆಹಾರದಲ್ಲಿ 20 ಮಿ.ಗ್ರಾಂ ಗ್ಲುಟೆನ್ ಸಾಮಾನ್ಯವಾಗಿ ಸ್ವೀಕಾರಾರ್ಹವಾಗಿರುತ್ತದೆ.
ಅಕ್ಕಿ, ಸಜ್ಜೆ, ರಾಗಿ, ಜೋಳ, ಹರಿವೆ, ಹುರುಳಿ, ಮುಸುಕಿನ ಜೋಳ, ನವಣಕ್ಕಿ, ಆರಾರೂಟ್, ಸಿಂಘಾರ ಮತ್ತು ಸಾಬಕ್ಕಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಆಹಾರವಸ್ತುಗಳನ್ನು ವ್ಯಕ್ತಿ ಮಧುಮೇಹಿಯಾಗಿದ್ದರೂ ಉಪಯೋಗಿಸಲು ಸಾಧ್ಯ. ಬೇಳೆಕಾಳುಗಳು, ಮಾಂಸ, ಮೊಟ್ಟೆ, ಹಣ್ಣುಗಳು, ತರಕಾರಿಗಳು, ಬೀಜಗಳು, ಕೊಬ್ಬುಗಳು ಮತ್ತು ಎಣ್ಣೆಗಳನ್ನು ಸುರಕ್ಷಿತ ಆಹಾರವಾಗಿ ಪರಿಗಣಿಸಲಾಗಿದೆ. ಮೊಸರು, ಪನೀರ್, ಚೀಸ್‌ಗಳಿಗೆ ಕೂಡ ಕೆಲವು ರೋಗಿಗಳು ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಸಕ್ಕರೆ, ಬೆಲ್ಲ, ಜೇನುತುಪ್ಪಗಳನ್ನು ಆರೋಗ್ಯಕರ ಮಿತಿಯಲ್ಲಿ ಸೇವಿಸಬಹುದು. ಸೂಪ್‌ಗಳು ಪಾಯಸಗಳು, ಲಸ್ಸಿ, ಮಜ್ಜಿಗೆ, ಜ್ಯೂಸ್‌ಗಳು, ಸಲಾಡ್‌ಗಳು, ಅನ್ನದ ಪಲಾವ್, ದೋಸೆ, ಇಡ್ಲಿ, ಆಯಾ ಋತುವಿನಲ್ಲಿ ದೊರೆಯುವ ಹಣ್ಣುಗಳು ಆಹಾರ ಕ್ರಮದಲ್ಲಿ ಸೇರಿಸಬಹುದಾದ ಕೆಲವು ಆರೋಗ್ಯಕರ ಆಯ್ಕೆಗಳಾಗಿವೆ.
-ಅರುಣಾ ಮಲ್ಯ
ಹಿರಿಯ ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಂಗಳೂರು