Advertisement

ಮನ ಸೆಳೆದ “ಬಣ್ಣದ ಪಯಣ’

09:58 AM Dec 31, 2019 | mahesh |

ಪುತ್ತೂರು: ಸಾಮಾನ್ಯವಾಗಿ ಖ್ಯಾತ ಕಲಾವಿದರಿಂದ ರೂಪು ಪಡೆದ ಚಿತ್ರಕಲಾ ಪ್ರದರ್ಶನಗಳು ಮಹಾನಗರಗಳಲ್ಲಿ ನಡೆಯುತ್ತವೆ. ಆದರೆ ಇದಕ್ಕೆ ಭಿನ್ನವಾಗಿ ರಾಷ್ಟ್ರಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಪರ್ಪುಂಜದಲ್ಲಿ ಆಯೋಜನೆಗೊಂಡು ಗಮನ ಸೆಳೆಯುತ್ತಿದೆ.

Advertisement

ಮಾಣಿ – ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಪ್ರಕೃತಿಯೇ ಮೈದಳೆದಿರುವ, ವಿವಿಧ ಹೂವು, ಹಣ್ಣು ಗಿಡಗಳ ತಾಣವಾಗಿರುವ ಪರ್ಪುಂಜದ ಸೌಗಂಧಿಕಾ ನರ್ಸರಿಯ ಮಧ್ಯೆ ಇರುವ ಮನೆಯ ಟೆರೇಸ್‌ನಲ್ಲಿ ದೇಶದ ಖ್ಯಾತ ಕಲಾವಿದರ ಈ ಚಿತ್ರಕಲೆ ಹಾಗೂ ಕೊಲಾಜ್‌ಗಳ ಪ್ರದರ್ಶನವನ್ನು “ಬಣ್ಣಗಳ ಪಯಣ’ ಹೆಸರಿನಲ್ಲಿ ಡಿ. 25ರಿಂದ ಆಯೋಜಿಸಲಾಗಿದೆ. ಡಿ. 31ರಂದು ಈ ಪ್ರದರ್ಶನ ಮುಕ್ತಾಯಗೊಳ್ಳಲಿದೆ.

ಖ್ಯಾತ ಕಲಾವಿದರಾದ ಅದಿತಿ ರಾಮನ್‌, ಭುವನೇಶ್‌ ಗೌಡ, ದೇವಿದಾಸ್‌ ಎಚ್‌. ಅಗಸೆ, ಗಿರಿಧರ ಖಾಸನೀಸ್‌, ಮಹೇಶ್‌ ಬಾಳಿಗ, ಮೋಹನ್‌ ಸೋನ, ಪುತ್ತೂರಿನವರೇ ಆದ ಓಬಯ್ಯ, ಪ್ರದೀಪ್‌ ಕುಮಾರ್‌ ಡಿ.ಎಂ., ರಿಯಾಸ್‌ ಸಮಾಧನ್‌,

ರೂಮಿ ಸಮಾಧನ್‌, ಸಬಿನ್‌ ದಾಸ್‌, ಸುಜಿತ್‌ ಎಸ್‌.ಎನ್‌., ಸುಜೀಶ್‌ ಓಂಚೆರ್ರಿ, ಸುಶ್ಮಿತಾ ಚೌಧರಿ, ವಾಮನ ಪೈ ಮೊದಲಾದವರ ಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಜಲವರ್ಣ, ತೈಲವರ್ಣ, ಕಾಷ್ಠಶಿಲ್ಪ, ಎಂಬ್ರಾಯಿಡರಿ ವರ್ಕ್‌ ಮಾದರಿ ಸೇರಿ ಒಟ್ಟು 18 ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಖ್ಯಾತ ಚಿತ್ರ ಕಲಾವಿದರು ಚಿತ್ರಿಸಿದ ವಿವಿಧ ವಸ್ತು ಸ್ಥಿತಿ, ಸಾಮಾಜಿಕ ವ್ಯವಸ್ಥೆಯನ್ನು ಬಿಂಬಿಸುವ ಕಲ್ಪನೆಗಳು ಕಲಾಸಕ್ತರ ಗಮನ ಸೆಳೆಯುತ್ತಿವೆ. ಚಿತ್ರಕಲೆ ಹಾಗೂ ಕೊಲಾಜ್‌ಗಳ ಸಮೂಹ ಪ್ರದರ್ಶನದ ವೀಕ್ಷಣೆಗೆ ಬೆಳಗ್ಗಿನಿಂದ ಸಂಜೆ ತನಕ ಕಲಾಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

Advertisement

 ಕಲೆಗೆ ಗೌರವ
ಕಲೆ ಪಟ್ಟಣಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲ ಆಸಕ್ತರನ್ನು ತಲುಪಿದಾಗ ಕಲೆ ಹಾಗೂ ಕಲಾವಿದನಿಗೂ ಗೌರವ ಸಿಗುತ್ತದೆ. ಪರ್ಪುಂಜದಂತಹ ಚಿಕ್ಕ ಊರಲ್ಲಿ ಇಂತಹ ಪ್ರದರ್ಶನವನ್ನು ಏರ್ಪಡಿಸಿರುವುದು ಖುಷಿ ನೀಡಿದೆ. ಈ ಕಾರಣದಿಂದ ಚಿತ್ರಕಲಾ ಪ್ರದರ್ಶನ ವೀಕ್ಷಿಸಲು ಬಂದಿದ್ದೇನೆ.
 - ನೇಮಿರಾಜ್‌, ಚಿತ್ರ ಕಲಾವಿದ, ಮಂಗಳೂರು

ಎಲ್ಲರಿಗೂ ಅವಕಾಶ
ಮಹಾನಗರಗಳಲ್ಲಿ ಹೈಟೆಕ್‌ ಗ್ಯಾಲರಿಗಳಲ್ಲಿ ನಡೆಯುವ ಖ್ಯಾತರ ಕಲಾ ಪ್ರದರ್ಶಗಳನ್ನು ವೀಕ್ಷಿಸಲು ಸಾಮಾನ್ಯ ಕಲಾಸಕ್ತರಿಗೆ ಅವಕಾಶ ಇರುವುದಿಲ್ಲ. ಅವರಿಗೂ ಈ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಸ್ನೇಹಿತರ ಸಹಕಾರದೊಂದಿಗೆ ಪ್ರದರ್ಶನ ಏರ್ಪಡಿಸಿದ್ದೇವೆ. ಖ್ಯಾತ ಚಿತ್ರ ಕಲಾವಿದರ ಜತೆಗೆ ದೇಶದ ವಿವಿಧ ವಿವಿಗಳಲ್ಲಿ ಚಿತ್ರಕಲಾ ಪದವಿಗಳನ್ನು ಪಡೆಯುತ್ತಿರುವ ಯುವ ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
– ಚಂದ್ರ , ಸಂಯೋಜಕರು

Advertisement

Udayavani is now on Telegram. Click here to join our channel and stay updated with the latest news.

Next