“ರಂಗಿತರಂಗ’ ತಂಡದ ಎರಡನೇ ಚಿತ್ರ “ರಾಜರಥ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಈ ತಿಂಗಳು ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕಳೆದ ಬಾರಿ “ರಂಗಿತರಂಗ’ ಚಿತ್ರದಲ್ಲಿ ಫಾರಿನ್ ಕ್ಯಾಮರಾ ಮ್ಯಾನ್ ಆದ ವಿಲಿಯಮ್ ಡೇವಿಡ್ ಸೇರಿದಂತೆ ಸಾಕಷ್ಟು ಮಂದಿ ನುರಿತ ಹಾಗೂ ಖ್ಯಾತನಾಮರೆನಿಸಿಕೊಂಡ ತಾಂತ್ರಿಕ ವರ್ಗವನ್ನು ಚಿತ್ರತಂಡ ಬಳಸಿಕೊಂಡಿತ್ತು.
ಈಗ “ರಾಜರಥ’ದಲ್ಲೂ ಅದನ್ನೇ ಮಂದುವರೆಸಿದೆ. ಈ ಬಾರಿಯೂ ಸಾಕಷ್ಟು ಹೆಸರು ಮಾಡಿದ, ದೊಡ್ಡ ಪ್ರಾಜೆಕ್ಟ್ಗಳಿಗೆ ಕೆಲಸ ಮಾಡಿದ ತಾಂತ್ರಿಕ ವರ್ಗವನ್ನು ಬಳಸಿಕೊಳ್ಳಲಾಗಿದೆ. ಚಿತ್ರದ ಕಲಾ ವಿನ್ಯಾಸವನ್ನು ರಜತ್ ಪೊದ್ದರ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ “ಜಗ್ಗ ಜಾಸೂಸ್’, “ಬರ್ಫಿ’, “ಜುಡ್ವಾ-2′ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ರಜತ್, “ರಾಜರಥ’ ಚಿತ್ರದ ಕಲಾ ವಿನ್ಯಾಸ ಮಾಡುವ ಮೂಲಕ ಚಿತ್ರಕ್ಕೆ ಹೊಸ ಬಣ್ಣ ಕೊಟ್ಟಿದ್ದಾರೆ.
“ಬಾಹುಬಲಿ’ “ಸನ್‌ಆಫ್ ಸತ್ಯಮೂರ್ತಿ’, “ರಾಜ್‌ಕುಮಾರ’ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಜಾನಿ ಮಾಸ್ಟರ್ “ರಾಜರಥ’ ಚಿತ್ರಕ್ಕೂ ನೃತ್ಯ ನಿರ್ದೇಶನ ಮಾಡಿದ್ದಾರೆ. ಇವರ ಜೊತೆಗೆ “ಬ್ಯಾಂಗ್ ಬ್ಯಾಂಗ್’, “ಶ್ರೀಮಂತುಡು’, “ಬದ್ರಿನಾಥ್ ಕೀ ದುಲ್ಹನಿಯ’, “ಶಾಂಧಾರ್’, “ತಮಾಷ’ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಬಾಸ್ಕೋ ಸೀಸರ್ ಕೂಡಾ “ರಾಜರಥ’ಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇನ್ನು, ಚಿತ್ರದ ಕಲರ್ ಗ್ರೇಡಿಂಗ್ ಅನ್ನು ಶಿವಕುಮಾರ್ ಮಾಡಿದ್ದಾರೆ.
“ಬಾಹುಬಲಿ 1-2′, “ಮಗಧೀರ’, “ದೃಶ್ಯಂ’, “ರಂಗಿತರಂಗ’ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದಾರೆ. “ಪದ್ಮಾವತಿ’, “ಟ್ಯೂಬ್‌ಲೈಟ್’, “ಶೆಫ್’, “ಗೋಲ್‌ಮಾಲ್ ಅಗೇನ್’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ದೀಪೇಶ್ ವರ್ಮ “ರಾಜರಥ’ ಚಿತ್ರದ ರಿದಮ್ ಅರೆಂಜರ್. ಹೀಗೆ ದೇಶದ ಖ್ಯಾತ ತಂತ್ರಜ್ಞರನ್ನು “ರಾಜರಥ’ ತಂಡ ಒಟ್ಟು ಸೇರಿಸಿದೆ. ಕಥೆಯ ಜೊತೆಗೆ ಸಿನಿಮಾ ತಾಂತ್ರಿಕವಾಗಿಯೂ ಶ್ರೀಮಂತವಾಗಿರಬೇಕೆಂಬ ಕಾರಣದಿಂದ ಇವರಿಂದ ಕೆಲಸ ಮಾಡಿಸಿದೆ.