Advertisement

ಸಂಭ್ರಮದ ಸಂಪ್ರದಾಯ : ಸೀಮಂತ ಸಂಸ್ಕಾರ 

12:30 AM Jan 25, 2019 | |

ಗರ್ಭಿಣಿ ಸ್ತ್ರೀಗೆ ಪತಿಯು ಸುಮುಹೂರ್ತದಲ್ಲಿ ಸಮಂತ್ರವಾಗಿ ಮೂರು ದರ್ಭಾಗ್ರಗಳಿಂದಲೂ, ಕಪ್ಪು , ಬಿಳಿ, ಕಂದು ವರ್ಣಗಳುಳ್ಳ ಶಲಿಲೀ ಮೃಗದ (ಮುಳ್ಳು ಹಂದಿಯ) ಮುಳ್ಳಿನಿಂದಲೂ ಪಾದದಿಂದ ಹಿಡಿದು ನಡುನೆತ್ತಿ ತನಕ ತಲೆಗೆ ನೋವಾಗದಂತೆ ಗೆರೆ ಎಳೆಯುವುದೇ ಸೀಮಂತ-ಉನ್ನಯನ ಸಂಸ್ಕಾರ. ಈ ಸಮಯದಲ್ಲಿ ಪುರುಷನು ಪತ್ನಿಯ ಎದುರಿನಲ್ಲಿ ಆಸೀನನಾಗಿರಬೇಕು.

Advertisement

ಮಾನವ ಜನ್ಮ ದೊಡ್ಡದು. ಅದನ್ನು ಕಡೆಗಣಿಸಬೇಡಿರೋ ಹುಚ್ಚಪ್ಪಗಳಿರಾ’ ಎಂದು ಪುರಂದರದಾಸರು ಹೇಳಿದ್ದಾರೆ. ಹುಟ್ಟಿದ ನಂತರ ಸಾಯುವವರೆಗಿನ ಅವಧಿಯಲ್ಲಿ ಷೋಡಶ ಸಂಸ್ಕಾರಗಳನ್ನು ಮಾಡಲೇಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಹದಿನಾರು ಸಂಸ್ಕಾರಗಳನ್ನು ಮಾಡಲು ಅಸಾಧ್ಯವಾದರೂ ನಾಮಕರಣ, ಉಪನಯನ, ಸೀಮಂತ ಎಂಬ ಕೆಲವನ್ನಾದರೂ ಮಾಡಿಯೇ ತೀರುತ್ತಾರೆ.

ಎಲ್ಲ ಶಾಸ್ತ್ರಗಳ ಪೈಕಿ “ಸೀಮಂತ’ ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧವನ್ನು ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಚೊಚ್ಚಲ ಕರುಳ ಕುಡಿಯನ್ನು ಗರ್ಭದಲ್ಲಿ ಹೊತ್ತ ಒಂದು ಹೆಣ್ಣು ಅದರ ಆಗಮನದ ನಿರೀಕ್ಷೆಯಲ್ಲಿ ಪುಳಕಿತಳಾಗಿರುವಂಥ ಸಂದರ್ಭದಲ್ಲಿ ನಡೆಸುವ ಶಾಸ್ತ್ರ.
ಗರ್ಭ ಧರಿಸಿದ ಮೂರನೇ ತಿಂಗಳಲ್ಲಿ “ಪುಂಸವನ’, “ಅನವಲೋಭನ’ ಎಂಬ ಸಂಸ್ಕಾರಗಳನ್ನು ನಡೆಸಲಾಗುವುದು. ಈ ಕಾಲದಲ್ಲಿ ಹೆಣ್ಣಿಗೆ ಆಹಾರ ರುಚಿಸದಿರುವುದು, ವಾಂತಿಯಾಗುವುದು ಎಲ್ಲ ಸಾಮಾನ್ಯ. ಆಗ ಪುಣ್ಯಾಹ ಮಾಡಿ ನಾಂದಿದೇವತೆಗಳನ್ನು ಪ್ರಾರ್ಥಿಸಿ ಪ್ರಜಾಪತಿಗೆ ಚರುದ್ರವ್ಯ ಆಹುತಿ ನೀಡುತ್ತಾರೆ. ಬಳಿಕ ಪತಿಯು ಪತ್ನಿಯ ಅಂಗೈಗೆ ಎರಡು ಉದ್ದಿನಕಾಳು, ಒಂದು ಗೋಧಿಯನ್ನು ಇಡಬೇಕು. ಅವಳು ಕಡೆದ ಮಜ್ಜಿಗೆಯೊಂದಿಗೆ ಪ್ರಾಶನ ಮಾಡಬೇಕು. ಶಾಸ್ತ್ರದ ಪ್ರಕಾರ ಉದ್ದು ಅಂಡದ ರೂಪವಾದರೆ, ಗೋಧಿ ಲಿಂಗರೂಪದ ಸಂಕೇತ. ಬಳಿಕ ದುಷ್ಟ ಶಕ್ತಿಯನ್ನು ನಿವಾರಿಸಲು ಅಶ್ವಗಂಧದ ರಸವನ್ನು ಪತ್ನಿಯ ಬಲ ಮೂಗಿಗೆ ಹಾಕಬೇಕು. ಇದರ ಉದ್ದೇಶ ಗರ್ಭಪಾತವನ್ನು ತಡೆಯುವುದು.

ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದನ್ನು “ಬಳೆ ತೊಡಿಸುವುದು’ ಎಂದು ಕರೆಯುತ್ತಾರೆ.

ಕರಾವಳಿ ಜಿಲ್ಲೆಗಳಲ್ಲಿ ಮಾಡುವ ಸೀಮಂತ
ಗರ್ಭಿಣಿ ಯುವತಿಗೆ ಕರಾವಳಿ ಭಾಗದ ವಿಪ್ರ ಸಂಪ್ರದಾಯದಲ್ಲಿ ಮಾಡಲಾಗುವ ಸೀಮಂತ ಶಾಸ್ತ್ರವು ವಿಭಿನ್ನವಾಗಿದ್ದರೂ ವಿಶಿಷ್ಟವಾಗಿದೆ. ಈ ರೀತಿಯ ಶಾಸ್ತ್ರ ಸಾಧಾರಣವಾಗಿ ಎಲ್ಲೂ ಕಂಡುಬರುವುದಿಲ್ಲ.

Advertisement

ಸೀಮಂತೋನ್ನಯನದ ಅರ್ಥ
ಸ್ತ್ರೀಯ ಬೈತಲೆ ಪ್ರದೇಶ ಅಂದರೆ ಹಣೆಯ ಮೇಲ್ಭಾಗದ ಕೂದಲು ಪ್ರಾರಂಭದ ಮಧ್ಯಭಾಗವನ್ನು “ಸೀಮಂತಿನಿ ರೇಖಾ’ ಪ್ರದೇಶವೆಂದೂ, ಅಲ್ಲಿ ಲಕ್ಷ್ಮಿಯ ಸನ್ನಿಧಾನ ವಿಶೇಷವಿದೆಯೆಂದೂ ನಂಬಿರುವ ಕಾರಣ ಆ ಪ್ರದೇಶವನ್ನು ಕೂದಲು ಮುಚ್ಚದಂತೆ ಬಾಚಿಕೊಳ್ಳಬೇಕೆಂದು ಶಾಸ್ತ್ರ ಹೇಳುತ್ತದೆ. ಗರ್ಭಿಣಿ ಸ್ತ್ರೀಗೆ ಪತಿಯು ಸುಮುಹೂರ್ತದಲ್ಲಿ ಈ ರೇಖೆಯನ್ನು ಸಮಂತ್ರವಾಗಿ ಮೂರು ದರ್ಭಾಗ್ರಗಳಿಂದಲೂ, ಕಪ್ಪು , ಬಿಳಿ, ಕಂದು ವರ್ಣಗಳುಳ್ಳ ಶಲಿಲೀ ಮೃಗದ (ಮುಳ್ಳು ಹಂದಿಯ) ಮುಳ್ಳಿನಿಂದಲೂ ಪಾದದಿಂದ ಹಿಡಿದು ನಡುನೆತ್ತಿ ತನಕ ತಲೆಗೆ ನೋವಾಗದಂತೆ ಗೆರೆ ಎಳೆಯುವುದೇ ಸೀಮಂತ-ಉನ್ನಯನ ಸಂಸ್ಕಾರ. ಈ ಸಮಯದಲ್ಲಿ ಪುರುಷನು ಪತ್ನಿಯ ಎದುರಿನಲ್ಲಿ ಆಸೀನನಾಗಿರಬೇಕು.

ಲಕ್ಷ್ಮೀದೇವಿಯ ಆರಾಧನೆ
ಸೀಮಂತ ಸಂಸ್ಕಾರವು ಗರ್ಭಿಣಿಯಲ್ಲಿ ಲಕ್ಷ್ಮೀ ಸಮಾವೇಶದ ಒಂದು ವಿಧಾನ. ಕಾರಣ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ಮಾಂಸದ ಸಾರವನ್ನು ಮಾಯಾದಿ ರಕ್ಕಸರ ದುಷ್ಟಶಕ್ತಿಗಳು ಹಾನಿಮಾಡಲು ಹಾತೊರೆಯುತ್ತಿರುತ್ತವೆ. ಇಂಥ ಶಕ್ತಿಗಳನ್ನು ಮೋಹಗೊಳಿಸಿ, ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ.

ಹೂವುಗಳ ಸಾತ್ವಿಕತೆ
ಪರಿಮಳವಿರುವ ಸಾತ್ವಿಕ ಹೂವುಗಳನ್ನು ಐದು, ಏಳು ಅಥವಾ ಒಂಬತ್ತು ಬಗೆ (ಇದರಲ್ಲಿ ಸಿಂಗಾರವೂ ಸೇರಿರಬೇಕು)ಗಳನ್ನು ಒಂದುಗೂಡಿಸಿ ಕಿರೀಟದಂತೆ ಸಿದ್ಧಗೊಳಿಸುತ್ತಾರೆ. ಒಂದು ಬಂಗಾರದ ಉಂಗುರವನ್ನು ಹಂದಿಮುಳ್ಳಿನ ನಡುವೆ ಇಟ್ಟು , ಎರಡು ಬಲಿಷ್ಟ ಹಣ್ಣಾದ ಅಡಿಕೆಗಳಿಗೆ ಚುಚ್ಚುತ್ತಾರೆ. ಎಳೆ ಸಿಂಗಾರದ ಹೂವು, ಅತ್ತಿ ಗಿಡದ ಚಿಕ್ಕ ಶಾಖೆಯನ್ನು ಸಿದ್ಧಪಡಿಸಿ ಲಕ್ಷ್ಮೀದೇವಿಯ ಆವಾಹನೆ ಮಾಡಿ ಉನ್ನನಯದೊಂದಿಗೆ ಈ ಹೂವಿನ ಕಿರೀಟವನ್ನು ಸಿದ್ಧಪಡಿಸುತ್ತಾರೆ. ಸಿಂಗಾರದ ಹೂ (ಅಡಿಕೆ ಗಿಡದ ಹೂ) ಫ‌ಲದ (ಮಗು) ಸಂಕೇತವಾದರೆ, ಅತ್ತಿ ಗಿಡ ದುಷ್ಟ ಶಕ್ತಿಯನ್ನು ನಿವಾರಿಸುವ ಶಕ್ತಿಯುಳ್ಳದ್ದು.

ಕೇಶಾಲಂಕಾರದ ವಿಶೇಷತೆ
ಗರ್ಭವತಿಗೆ ಕೇಶಾಲಂಕಾರ ಮಾಡುವಾಗ ಎಂಟನೆಯ ತಿಂಗಳಿನ ಸಂಕೇತವಾಗಿ ಜಡೆಗೆ ಮೇಲಿನಿಂದ ಕೆಳಗಿನವರೆಗೆ ಎಂಟು ಜಡೆಬಿಲ್ಲೆಗಳನ್ನು ಇಡುತ್ತಾರೆ. ಸೀಮಂತ ಪ್ರದೇಶ ಅಂದರೆ ಬೈತಲೆಯ ಉಭಯ ಪಾರ್ಶ್ವಗಳಲ್ಲಿ ಎರಡು ಚಿಕ್ಕ ಜಡೆ, ಹಿಂಬದಿಯಲ್ಲಿ ಎರಡು ಚಿಕ್ಕ ಜಡೆಗಳನ್ನು ಹೆಣೆಯುತ್ತಾರೆ. ತ್ರಿಜಟೆಯನ್ನು ಹೆಣೆಯುವುದು ಸಮುಚಿತವಲ್ಲ. ಲಕ್ಷ್ಮೀಸ್ತೋತ್ರದಲ್ಲಿ ಚತುಷ್ಕಪರ್ದಾ (ನಾಲ್ಕು ಜಡೆಯವ) ಎಂಬ ವರ್ಣನೆಯಿದೆ. ಮಲ್ಲಿಗೆಯಿಂದ ಇಡೀ ತಲೆಯನ್ನು ಅಲಂಕರಿಸುತ್ತಾರೆ.

ಪತಿಯು ಪತ್ನಿಯ ನಡುನೆತ್ತಿಯಲ್ಲಿ ಹೂವಿನ ಕಿರೀಟವನ್ನು ಇರಿಸಿದಾಗ ನಾಲ್ಕು ಜನ ಮುತ್ತೈದೆಯರು ಮುಂದಲೆಯಲ್ಲಿ ಹೆಣೆದಿಟ್ಟಿದ್ದ ಎರಡು ಜಡೆ ಹಾಗೂ ದಾರದ ಸಹಾಯದಿಂದ ಅದನ್ನು ಕಟ್ಟಬೇಕು. ಇದಕ್ಕೆ “ಹೂವಿಡುವ’ ಮುಹೂರ್ತ ಎನ್ನುತ್ತಾರೆ. ಧಾಕಾ, ರಾಕಾ, ವಿಷ್ಣು , ಪ್ರಜಾಪತಿ ದೇವತೆಗಳಿಗೆ ಆಜ್ಯಾìಹುತಿಯನ್ನು ಸಮರ್ಪಿಸಿ, ಸುಹಾಸಿನಿಯರಿಗೆ ಫ‌ಲದಾನ ಕೊಡಿಸುವ ಒಂದು ವಿಧಿ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಕರ್ಕಶವಾದ ವಾದ್ಯಗಳನ್ನು ನುಡಿಸದೆ, ವೀಣೆ ನುಡಿಸುತ್ತ ಸಾಮವೇದ ಗಾಯನ ಮಾಡಬೇಕೆಂದು ಶಾಸ್ತ್ರದಲ್ಲಿ ಲಿಖೀತವಾಗಿದೆ.

ಭೋಜನದ ವಿಶಿಷ್ಟತೆ
ಈ ಎಲ್ಲ  ಕಾರ್ಯಕ್ರಮಗಳ ನಂತರ ಹುಡುಗಿಯ ತವರುಮನೆಯವರು ಮಗಳಿಗೆ ಪಟ್ಟೆಸೀರೆ, ಶಕಾöನುಸಾರ ಆಭರಣಗಳನ್ನು  ಕೊಟ್ಟು ಮಡಿಲು ತುಂಬುತ್ತಾರೆ. ಅನಂತರ ಬಸುರಿಗೆ ತೆಂಗಿನಕಾಯಿ, ಅಕ್ಕಿ, ಸಿಂಗಾರದ ಹೂ, ಬಾಳೆಹಣ್ಣಿನಿಂದ ಉಡಿ ತುಂಬಿ ಬಂಧುಬಾಂಧವರೆಲ್ಲರೂ ಉಡುಗೊರೆ ಕೊಟ್ಟು ಆಶೀರ್ವದಿಸುತ್ತಾರೆ. ಭೋಜನದ ವಿಶಿಷ್ಟತೆ ಎಂದರೆ ಸಿಹಿ ತಿಂಡಿತಿನಿಸು ಏನೇ ಮಾಡಿರಲಿ ಅರಳುಪುಡಿ, ತೆಂಗಿನತುರಿ, ಸಕ್ಕರೆಯಿಂದ ಮಾಡಿದ “ಪುರಿ’ ಎಂದು ಹೇಳುವ ಸಿಹಿತಿಂಡಿ ಜೊತೆಗೆ ಚಕ್ಕುಲಿ ಇರಲೇಬೇಕು. ಜೊತೆಗೆ ಸಂಭ್ರಮದಲ್ಲಿ ಸ್ವಾದಿಷ್ಟ ಊಟವನ್ನು ಬಡಿಸುತ್ತಾರೆ.

ಎಲ್ಲವೂ ನಡೆದ ನಂತರ ಮದುಮಗಳ ತಲೆಯ ಮೇಲೆ ಇಟ್ಟಿದ್ದ ಹೂವಿನ ಕಿರೀಟವನ್ನು ಕೆಳಗಿಳಿಸುವ ಕಾರ್ಯಕ್ರಮದಲ್ಲಿ ಮತ್ತೆ ಹೂವನ್ನು ಇಟ್ಟ ಸುಮಂಗಲಿಯರು ಮತ್ತು ಅವಳ ಪತಿಯು ಭಾಗವಹಿಸಲೇಬೇಕಾಗುತ್ತದೆ. ತೆಗೆದ ನಂತರ ಅದರ ಜೊತೆಯಲ್ಲಿರುವ ಅಡಕೆಯನ್ನು ಆಕೆ ತೋಟದಲ್ಲಿ ನೆಡಬೇಕು. ಅದು ಫ‌ಲವತ್ತಾಗಿ ಬೆಳೆಯುವಂತೆ ಬಯಸಬೇಕು. ಮತ್ತೆ ಉಳಿದ ಸಿಂಗಾರದ ಹೂಗಳನ್ನು ಹಾಲು ಸ್ರವಿಸುವ ಮರಕ್ಕೆ ಮೇಲ್ಮುಖವಾಗಿ ಕಟ್ಟಬೇಕೆಂಬ ಸಂಪ್ರದಾಯವಿದೆ. ಇನ್ನು ಕಾರ್ಯಕ್ರಮದ ಅಂತಿಮ ಹಂತ. ಮದುಮಗಳನ್ನು ಅವಳ ತವರಿಗೆ ಕಳುಹಿಸಿಕೊಡುವಂತಹುದು. ಅವಳನ್ನು ದೇವರ ಮುಂದೆ ಮಣೆಯ ಮೇಲೆ ಕುಳ್ಳಿರಿಸಿ, ಅವಳ ಸೆರಗಿಗೆ ಅಕ್ಕಿ, ಕಾಳುಮೆಣಸು, ಅರಸಿನದ ಕೊಂಬನ್ನು ಕಟ್ಟಬೇಕು. ನಂತರ ಗಂಡನು ಪೂರ್ಣಫ‌ಲ (ತೆಂಗಿನಕಾಯಿ)ವನ್ನು ಅವಳ ಕೈಗೆ ನೀಡಿದ ನಂತರ ಅವಳನ್ನು ಅವಳ ಹೆತ್ತವರು ಕರೆದುಕೊಂಡು ಹೋಗುತ್ತಾರೆ. ನಂತರ ಅವಳು ಪತಿಗೃಹಕ್ಕೆ ಕಾಲಿಡುವುದು ತೊಟ್ಟಿಲು ಮಗುವಿನೊಂದಿಗೇ ಎನ್ನುವುದು ಇಲ್ಲಿ ಮುಖ್ಯ.

ಪುಷ್ಪಾ ಎನ್‌. ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next