Advertisement

ಶಾಂತಿ ದೂತನ ಸ್ಮರಣೆಯ ಸಂಭ್ರಮ

12:42 AM Dec 26, 2019 | Lakshmi GovindaRaj |

ಬೆಂಗಳೂರು: ಸೇಂಟ್‌ ಜೋಸೆಫ್‌ ಚರ್ಚ್‌, ಯುನೈಟೆಡ್‌ ಮಿಷನ್‌ ಹಾಲ್‌, ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥೆ ಡ್ರಲ್‌ ಚರ್ಚ್‌ ಸೇರಿದಂತೆ ನಗರದ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಿದರು.

Advertisement

ಮಂಗಳವಾರ ಮಧ್ಯರಾತ್ರಿ ಬಾಲ ಯೇಸುವನ್ನು ಮೆರವಣಿಗೆಯ ಮೂಲಕ ತಂದು ಮೊದಲೇ ನಿರ್ಮಾಣಗೊಂಡಿದ್ದ ಗೋದಲಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪವಿತ್ರ ತೀರ್ಥದ ಪ್ರೋಕ್ಷಣೆ ನಡೆಯಿತು. ಆರತಿ, ಪುಷ್ಪದ ಅರ್ಚನೆಗಳಾದವು. ನಂತರ “ಬಲಿಪೂಜೆ’ ನಡೆಯಿತು. ಕ್ರೈಸ್ತ ಬಾಂಧವರು ಬುಧವಾರ ಬೆಳಗ್ಗೆ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಹುತೇಕ ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಜರುಗಿತು. ನಂತರ ಇಂಗ್ಲಿಷ್‌, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಧರ್ಮಗುರುಗಳು ಸಾಮಾಜಿಕ ಬಾಂಧವ್ಯ ಮತ್ತು ಜಾಗತಿಕ ಶಾಂತಿಯ ಕುರಿತು ಸಂದೇಶಗಳನ್ನು ಸಾರಿದರು. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಯೇಸುವಿನ ಮಹಿಮೆಯನ್ನು ಸಾರುವ ಮೂಲಕ ಅತ್ಯಂತ ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಿಸಲಾಯಿತು.

ನಕ್ಷತ್ರಗಳ ಚಿತ್ತಾರ: ಕ್ರಿಸ್‌ಮಸ್‌ಗೆ ಚರ್ಚ್‌ಗಳು ಮಾತ್ರವಲ್ಲದೆ ನಗರದ ಬಹುತೇಕ ಮಾಲ್‌ಗ‌ಳು ವಿಶೇಷವಾಗಿ ಅಲಂಕೃತಗೊಂಡಿದ್ದು, ನೋಡುಗರನ್ನು ಸೆಳೆಯುತ್ತಿದ್ದವು. ಸಂಜೆಯಾಗುತ್ತಲೇ ನಗರದಲ್ಲಿ ನಕ್ಷತ್ರಗಳ ಚಿತ್ತಾರ, ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ವಿದ್ಯುದ್ದೀಪಗಳು ಕಣ್ಮನ ಸೆಳೆಯುತ್ತಿದ್ದು, ಚರ್ಚ್‌ಗಳ ಒಳ ಮತ್ತು ಹೊರಾಂಗಣಗಳು ದೀಪಾಲಂಕಾರದೊಂದಿಗೆ ಝಗಮಗಿಸುತ್ತಿದ್ದವು.

ಜತೆಗೆ ಸಣ್ಣ ಕಟ್ಟಡದಿಂದ ಹಿಡಿದು ಬೃಹತ್‌ ಕಟ್ಟಡದವರೆಗೆ ಎಲ್ಲಿ ನೋಡಿದರೂ ಕ್ರಿಸ್‌ಮಸ್‌ ಟ್ರೀಯ ಅಲಂಕಾರ, ಆ ಮರಕ್ಕೆ ಕಟ್ಟಿರುವ ಶಾಂತಿ ಸಂದೇಶದ ಬೆಲ್‌ಗ‌ಳು, ಉಡುಗೊರೆಗಳ ಬಾಕ್ಸ್‌ಗಳು, ಸಾಂತಾಕ್ಲಾಸ್‌ನ ಟೋಪಿ, ಶೂ ಹಾಗೂ ಇತರೆ ಪರಿಕರಗಳು ಆಕರ್ಷಕವಾಗಿವೆ. ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮಾಲ್‌ಗ‌ಳಲ್ಲಿ ಕ್ರಿಸ್‌ಮಸ್‌ ಅಲಂಕಾರದಿಂದ ಗಮನ ಸೆಳೆಯುತ್ತಿವೆ.

Advertisement

ವಿಶೇಷ ವಿನ್ಯಾಸದಲ್ಲಿ ಗೋದಲಿಗಳು: ವಿಭಿನ್ನ ವಿನ್ಯಾಸದ ಕ್ರಿಬ್‌ (ಗೋದಲಿ)ಗಳು, ಸಾಂತಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ, ಚರ್ಚ್‌ ಸದಸ್ಯರಿಂದ “ಕ್ಯಾರಲ್‌ ಸಿಂಗಿಂಗ್‌’. ಹೀಗೆ ಸಡಗರ, ಸಂಭ್ರಮದಿಂದ ಶಾಂತಿದೂತ ಯೇಸುವಿನ ಜನ್ಮ ದಿನವನ್ನು ಆಚರಿಸಲಾಯಿತು.

“ಮೇರಿ ಕ್ರಿಸ್‌ಮಸ್‌’ ಸಂದೇಶದ ಕ್ರಿಸ್‌ಮಸ್‌ ಕಾರ್ಡ್‌ಗಳು, ಉಡುಗೊರೆಗಳು ಪರಸ್ಪರ ವಿನಿಮಯವಾದವು. ಹಲವು ಕ್ರೈಸ್ತ ಬಾಂಧವರು ಅಶಕ್ತರಿಗೆ ಮತ್ತು ಬಡವರಿಗೆ ಬಟ್ಟೆ, ಹಣ ಇತ್ಯಾದಿಗಳನ್ನು ದಾನ ಮಾಡುವ ಮೂಲಕ ಯೇಸುವಿನ ಆದರ್ಶಗಳನ್ನು ಪಾಲಿಸಿದರು. ನಗರದಲ್ಲಿರುವ ಕ್ರೈಸ್ತ ಸಮುದಾಯದ ಅಸೋಸಿಯೇಷನ್‌ಗಳು ಕೂಡ ಹಲವು ಆರೋಗ್ಯ ಶಿಬಿರಗಳನ್ನು ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next