ಗೌರಿಬಿದನೂರು: ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥ ಅಶ್ವತ್ವನಾರಾಯಣ ಸ್ವಾಮಿ ಬ್ರಹ್ಮರಥೋತ್ಸವಕ್ಕೂ ಮುನ್ನವೇ ನಡೆಯುವ ದನಗಳ ಜಾತ್ರೆ ಕಳೆಕಟ್ಟಿದೆ. ಎರಡು ವರ್ಷಗಳ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಭಾಗವಹಿಸಿದ್ದು, ಸಂಭ್ರಮ ಮನೆ ಮಾಡಿದೆ.
ಎರಡು ವರ್ಷಗಳಿಂದ ಕೊರೊನಾ ಕರಿನೆರಳಿನಲ್ಲಿ ದನಗಳ ಜಾತ್ರೆಯನ್ನು ರದ್ದು ಪಡಿಸಲಾಗಿತ್ತು. ಈ ಬಾರಿಯ ಜಾತ್ರೆಯಲ್ಲಿ ರೈತರು ಉತ್ಸಾಹದಿಂದ ಭಾಗಿ ಆಗಿದ್ದಾರೆ. ಜಾತ್ರೆಯಲ್ಲಿ ಅಮೃತಮಹಲ್, ಹಳ್ಳಿಕಾರು, ನಾಟಿ ಎತ್ತುಗಳು ಜಮಾವಣೆಗೊಂಡಿವೆ. ಎತ್ತುಗಳನ್ನು ಖರೀದಿಸಲು ರಾಯಚೂರು, ಬಳ್ಳಾರಿ ಬೀದರ್, ಹುಬ್ಬಳ್ಳಿ, ಆಂಧ್ರದ ಕಡಪ, ಧರ್ಮಾವರಂ, ಅನಂತಪುರಂ, ತಾಡಪತ್ರಿ ಮುಂದಾದ ಕಡೆಗಳಿಂದ ರೈತರು ಬರುತ್ತಾರೆ. 40 ಸಾವಿರ ರೂ.ನಿಂದ 2 ಲಕ್ಷ ರೂ. ವರೆಗೆ ಎತ್ತುಗಳನ್ನು ಮಾರಾಟ ಮಾಡಲಾಗುತ್ತದೆ.
ನೀರಿನ ವ್ಯವಸ್ಥೆ: ವಿದುರಾಶ್ವತ್ಥ ದನಗಳ ಜಾತ್ರೆಗೆ ಬರುವ ರಾಸುಗಳಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಕುಡಿಯುವ ನೀರಿಗಾಗಿ 6 ತೊಟ್ಟಿ ನಿರ್ಮಾಣ ಮಾಡಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಒಂದು ಮೊಬೈಲ್ ನೀರಿನ ಟ್ಯಾಂಕರ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ.
ಸುಂಕ ಉಚಿತ: ಕೆ.ಆರ್.ಸ್ವಾಮಿ ವಿವೇಕಾನಂದ ಫೌಂಡೇಷನ್ ಅಧ್ಯಕ್ಷ ಡಾ.ಕೆ.ಕೆಂಪರಾಜು ಜಾತ್ರೆಗೆ ಬರುವ ರಾಸುಗಳ ಸ್ಥಳ ಸುಂಕವನ್ನು ಹರಾಜಿನಲ್ಲಿ ಪಡೆದುಕೊಂಡು, ಉಚಿತ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ದನಗಳಿಗೆ ನೀರಿನ ಟ್ಯಾಂಕರ್ ವ್ಯವಸ್ಥೆ, ಮಧ್ಯಾಹ್ನದ ವೇಳೆಗೆ ಮಜ್ಜಿಗೆ ಕೇಂದ್ರ ತೆರೆಯುವ ಮೂಲಕ ಬಿಸಿಲಿನ ಬೇಗೆ ನೀಗಿಸಲು ಮುಂದಾಗಿದ್ದಾರೆ.
ವೈದ್ಯಕೀಯ ಸೌಲಭ್ಯ: ಜಾತ್ರೆಗೆ ಬರುವ ರಾಸುಗಳ ಆರೋಗ್ಯ ತಪಾಸಣೆಗಾಗಿ ಇಲ್ಲಿನ ಪಶು ವೈದ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರೀತಿಯ ತಪಾಸಣೆ ಕೈಗೊಂಡಿದೆ.
ಬಹುಮಾನ: ಜಾತ್ರೆಗೆ ಬರುವ ಅತ್ಯುತ್ತಮ ರಾಸುಗಳಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಾತ್ರೆಗೆ ಬರುವ ರಾಸುಗಳಿಗಾಗಿ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ರಾಸುಗಳು ಆಂಧ್ರ ಸೇರಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿವೆ.
● ಮರಿರಾಜು, ಇಒ. ವಿದುರಾಶ್ವತ್ಥ ಕ್ಷೇತ್ರ.