ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬುಧವಾರ ಈದ್-ಉಲ್- ಫಿತರ್(ರಂಜಾನ್) ಹಬ್ಬದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರದ ಡಂಬಳ ನಾಕಾ, ಮುಳಗುಂದ ನಾಕಾ ಹಾಗೂ ಬೆಟಗೇರಿಯಲ್ಲಿರುವ ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕವಾಗಿ ನಮಾಜ್ ಮಾಡಿದರು.
ಈ ಮೂಲಕ ರಂಜಾನ್ ನಿಮಿತ್ತ ಒಂದು ತಿಂಗಳ ಕಾಲ ಕೈಗೊಂಡಿದ್ದ ಉಪವಾಸ ವ್ರತಾಚರಣೆಯನ್ನು ಅಂತ್ಯಗೊಳಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ನೂತನ ವಸ್ತ್ರಗಳನ್ನು ಧರಿಸಿ ನೂತನ ಟೋಪಿ, ಅರಬ್ ರಾಷ್ಟ್ರಗಳ ಮಾದರಿಯಲ್ಲಿ ರುಮಾಲು ಸುತ್ತಿದ್ದ ಚಿಣ್ಣರು, ಯುವಕರು ಎಲ್ಲರ ಗಮನ ಸೆಳೆದರು.
ಇಲ್ಲಿನ ಡಂಬಳ ನಾಕಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರೊ| ಕಿಶೋರಬಾಬು ನಾಗರಕಟ್ಟಿ, ಉಮರ್‌ಫಾರೂಕ್ ಹುಬ್ಬಳ್ಳಿ, ಅಬ್ದುಲ್ ನರಗುಂದ, ಸಾಧಿಕ್ ನರಗುಂದ, ಅ.ದ. ಕಟ್ಟಿಮನಿ, ಎನ್.ಐ. ಮಕಾನದಾರ, ಅಕ್ಬರಸಾಬ್ ಬಬರ್ಚಿ, ಜಿ.ಎಂ. ದಂಡಿನ, ಶಫಿ ನಾಗರಕಟ್ಟಿ ಪಾಲ್ಗೊಂಡಿದ್ದರು.
ಬಳಿಕ ಆಶೀರ್ವಚನ ನೀಡಿದ ಧರ್ಮಗುರುಗಳು, ದೇಶದಲ್ಲಿ ಉತ್ತಮ ಮಳೆ, ಬೆಳೆ ಆಗಬೇಕು. ವಿಶ್ವದಲ್ಲಿ ಶಾಂತಿ-ಸೌಹಾರ್ದತೆ ನೆಲೆ ನಿಲ್ಲಬೇಕು. ಈದ್ ಉಲ್ ಫಿತರ್ ಆಚರಣೆಯಿಂದ ಸಮಾಜದಲ್ಲಿ ಸೌಹಾರ್ದ, ಸಹನೆ, ಪರಸ್ಪರ ಪ್ರೀತಿ- ವಿಶ್ವಾಸ ವೃದ್ಧಿಯಾಗಬೇಕು. ಉಳ್ಳವರು ಬಡವರಿಗೆ ದಾನ, ಧರ್ಮ ಮಾಡಬೇಕು ಎಂದು ಸಲಹೆ ನೀಡಿದರು.
ಅದರೊಂದಿಗೆ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಾಮೂಹಿಕ ಪ್ರರ್ಥನೆ ಬಳಿಕ ಪರಸ್ಪರ ಆಲಂಗಿಸಿಕೊಂಡು ‘ಈದ್ ಮುಬಾರಕ್’ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ, ರಂಜಾನ್ ಹಬ್ಬದ ಶುಭಶಯ ವಿನಿಮಯ ಮಾಡಿಕೊಂಡರು.
ಹಬ್ಬದ ನಿಮಿತ್ತ ಮನೆಗಳಲ್ಲಿ ಗೋಡಂಬಿ, ಪಿಸ್ತಾ, ಬಾದಾಮ, ಕೇರಬೀಜ ಮತ್ತಿತರ ಪದಾರ್ಥಗಳೊಂದಿಗೆ ತಯಾರಿಸಿದ ಸುರಕುಂಬ(ಪಾಯಸ) ಸವಿದರು. ಅಕ್ಕ ಪಕ್ಕದ ಮನೆಯವರಿಗೂ ಸುರಕುಂಬ ನೀಡಿ, ಸೌಹಾರ್ದತೆ ಮೆರೆದರು. ಸಂಬಂಧಿಕರು ಹಾಗೂ ನೆರೆಹೊರೆಯರಿಗೆ ಹಬ್ಬದ ಔತಣ ನೀಡಿ, ಸಂಭ್ರಮಿಸಿದರು. ಹಿರಿಯರಿಂದ ‘ಈದಿ’ (ಹಬ್ಬದ ಸಂದರ್ಭ ಮಕ್ಕಳಿಗೆ ನೀಡುವ ಉಡುಗೊರೆ) ಪಡೆದು ಖುಷಿ ಪಟ್ಟರು.