ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ಜೋಡು ರಥೋತ್ಸವ ಹಾಗೂ ಶ್ರೀ ಶರಣಬಸವೇಶ್ವರ ಬೆಳ್ಳಿ ಮೂರ್ತಿಯ ಮೆರವಣಿಗೆ ಸೋಮವಾರ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರ ಪೌರೋಹಿತ್ಯದಲ್ಲಿ ಸಾಂಗವಾಗಿ ನಡೆಸಲಾಯಿತು. ಸಂಜೆ 6:15ಕ್ಕೆ ಹಿರೇಮಠದ ಮರುಳ ಸಿದ್ಧಯ್ಯಸ್ವಾಮಿಗಳು ಸೇರಿದಂತೆ ಹರಗುರುಚರಮೂರ್ತಿಗಳ ಸಾನಿಧ್ಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ಪೂಜೆ ಸಲ್ಲಿಸಿದರು.
ನಂತರ ಪುರಾಣ ಸಮಿತಿಯ ಸರ್ವ ಸದಸ್ಯರು ಜೋಡು ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿದ ರಥವನ್ನು ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ಎಳೆದಾಗ ನೆರೆದಿದ್ದ ಅಪಾರ ಭಕ್ತರು ಜಯಘೋಷ ಹಾಕುತ್ತ ಧನ್ಯತಾಭಾವದಿಂದ ನಮಿಸಿದರು.
ರಥಬೀದಿಯ ಮನೆ ಮಾಳಿಗೆ ಮೇಲೆ ಹಾಗೂ ರಸ್ತೆಯ ಅಕ್ಕಪಕ್ಕ ನಿಂತ ಭಕ್ತರು ಬಾಳೆಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಭಜನೆ, ಡೊಳ್ಳು, ಭಾಜಾ ಭಜಂತ್ರಿ ರಥೋತ್ಸವಕ್ಕೆ ಮೆರಗು ತಂದವು. ಜಯಘೋಷ ಮುಗಿಲು ಮುಟ್ಟಿತ್ತು.
ಜೋಡು ರಥೋತ್ಸವ ಬಸವಣ್ಣನ ಪಾದಗಟ್ಟೆವರೆಗೆ ತೆರಳಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು. ಪಟ್ಟಣದ ಜನಪ್ರತಿನಿಧಿ ಗಳು, ಬಿಜೆಪಿ ಮುಖಂಡರಾದ ಗಾಯತ್ರಿ ತಿಮ್ಮಾರಡ್ಡಿಗೌಡ ಗಿಲ್ಲೇಸ್ಗೂರ, ರಾಜಗೋಪಾಲ, ಪುರಸಭೆ ಮುಖ್ಯಾಧಿ ಕಾರಿ ರಡ್ಡಿರಾಯನಗೌಡ ಹಾಗೂ ಪ್ರಮುಖರು ಸೇರಿದಂತೆ ವಿವಿಧ ಗ್ರಾಮಗಳ ಕ್ಯಾಂಪ್‌ಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.