ಬೆಂಗಳೂರು: ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವತಿಯಿಂದ ಬನ್ನೇರುಘಟ್ಟದ ಬಿಲ್ಲವ ಭವನದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಗುರುಕೃಪಾ ಸೇವಾಶ್ರಮದ ವಿಖ್ಯಾತನಂದ ಸ್ವಾಮೀಜಿ ಪ್ರಸ್ತುತ ಸಮಾಜಕ್ಕೆ ನಾರಾಯಣಗುರುಗಳ ತತ್ವಾದರ್ಶಗಳು ಮಾದರಿಯಾಗಬೇಕು. ಕಠಿಣ ಪರಿಶ್ರಮದೊಂದಿಗೆ ದೇವರ ಆಶೀರ್ವಾದವೂ ಸೇರಿದರೆ ಮತ್ತಷ್ಟು ಪ್ರಗತಿ ಸಾಧಿಸಬಹುದು ಎಂದು ನುಡಿದರು.
ಶಿವಗಿರಿ ಮಠದ ಸತ್ಯಾನಂದ ತೀರ್ಥರು ಆಶೀರ್ವಚನ ನೀಡುತ್ತಾ, ಯುವಜನತೆ ಹಾಗೂ ಇಂದಿನ ಸಮಾಜ ಮೂಢನಂಬಿಕೆಗಳಿಗೆ ಬಲಿಯಾಗದೇ, ನಮ್ಮ ಮೂಲನಂಬಿಕೆಗಳನ್ನು ಉಳಿಸಿಕೊಳ್ಳಬೇಕಿದೆ. ಜೊತೆಗೆ ಯುವಜನತೆಯೂ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಾಯ ನೀಡಿಗೌರವಿಸಲಾಯಿತು. ನಾರಾಯಣಗುರುಗಳ ತತ್ವಾದರ್ಶಗಳ ಬಗ್ಗೆ ಪ್ರವಚನ ಹಾಗೂ ಭಜನೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 1500 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ, ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾರ್,ಉಪಾಧ್ಯಕ್ಷ ಕೇಶವ ಪೂಜಾರಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.